ಶೀರ್ಷಿಕೆಗಳು

Thursday, November 18, 2010

ಕುತಸ್ತ್ವಾ ಕಶ್ಮಲಮಿದಂ?

ಕೃಷ್ಣನ ಪರಿಸ್ಥಿತಿಯನ್ನೊಮ್ಮೆ ನೋಡಿ - ಪರಮ ಪುರುಷ, ಗೀತಾಚಾರ್ಯ ಇತ್ಯಾದಿ ಆಯಾಮಗಳನ್ನೆಲ್ಲ ಒಂದು ಕ್ಷಣ ಮರೆತು ನೋಡಿ, ಕೇವಲ ಒಬ್ಬ ಚಾಣಾಕ್ಷ ಮಾನವನಾಗಿ.

ಅರಿತೋ ಅರಿಯದೆಯೋ, ಬೇಕಿದ್ದೋ ಬೇಡದೆಯೋ ಅವನಿಂದು ಪಾಂಡವ ಬಣದ ಮಹಾನಾಯಕ. ಕೇವಲ ಪಾರ್ಥಸಾರಥಿಯಲ್ಲ, ಪಾರ್ಥನ ರಥನಡೆಸುವವನಲ್ಲ, ಇಡೀ ಪಾಂಡವಬಲವನ್ನು ಮುನ್ನಡೆಸುವವನು. ಭೀಮಾರ್ಜುನರೇ ಮುಂತಾದ ಅತಿರಥ ಮಹಾರಥರಿದ್ದರೂ ಅವರೆಲ್ಲಾ ಕೇವಲ ಕೃಷ್ಣನ ಕೈಬೊಂಬೆಗಳೇ. ಕೌರವಸೇನೆಗಿರುವಂತೆ ಯುದ್ಧದ ವ್ಯೂಹ ನಿರ್ಮಿಸುವ ದ್ರೋಣರಾಗಲಿ, ರಣತಂತ್ರವನ್ನು ರೂಪಿಸುವ ಭೀಷ್ಮರಾಗಲಿ ಪಾಂಡವರಿಗಿಲ್ಲ. ಯುದ್ಧತಂತ್ರವನ್ನು ರೂಪಿಸುವುದರಿಂದ ಹಿಡಿದು ರಣರಂಗದಲ್ಲಿ ರಥ ನಡೆಸುವವರೆಗೂ ಯುದ್ಧದ ಸಕಲನಿರ್ವಹಣೆಯೂ ಕೃಷ್ಣನದೇ. ಪಾಂಡವರ ಸೋಲೋ ಗೆಲುವೋ ಮಾನವೋ ಅಪಮಾನವೋ ಎಲ್ಲವೂ ಕೃಷ್ಣನದೇ. ಹೀಗಿರುವಾಗ - ಯುದ್ಧವನ್ನೇ ಲಕ್ಷ್ಯದಲ್ಲಿಟ್ಟ ತನ್ನ "ಸಂಧಿ"ಯ ಮಾತುಗಳೆಲ್ಲಾ ನಿಷ್ಫಲವಾಗಿ ದುರ್ಯೋಧನ ಸಡ್ಡುಹೊಡೆದು ನಿಂತಿರುವಾಗ; ಸ್ವತಃ ಭೀಮಾರ್ಜುನರೇ ಉತ್ಸುಕರಾಗಿ ಕುಣಿದು ಕುಣಿದು ಯುದ್ಧವನ್ನೂ ಘೋಷಿಸಿರುವಾಗ, ಯುದ್ಧಾರಂಭಕ್ಕೆ ಕೊನೆಯ ಸೂಚನೆಯಾಗಿ ರಣಕಹಳೆಯೂ ಮೊಳಗಿಬಿಟ್ಟಿರುವಾಗ - ಪಾಂಡವಸೇನೆಯ ಮುಂಚೂಣಿ ನಾಯಕನಾದ ಅರ್ಜುನ ಹೀಗೆ ಕೈಕುಸಿದು "ನನಗೆ ಯುದ್ಧ ಬೇಡ" ಎಂದು ಕುಳಿತುಬಿಟ್ಟರೆ, ಕೃಷ್ಣನಿಗೆ ಹೇಗಾಗಬೇಡ. ಇದನ್ನು ಹೇಳಬಂದ ಕಾರಣವಿಷ್ಟೇ. ಜಗದ್ಗುರುವಾಣಿಯಾದ ಭಗವದ್ಗೀತೆ ಅಂಥಾದ್ದೊಂದು ಹಣೆಪಟ್ಟಿಯನ್ನೇನು ಹೊತ್ತುಕೊಂಡು ಶುರುವಾಗುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯಮಾನವನಾದ ಅರ್ಜುನ, ಅಪ್ರತಿಮ ಚಾಣಾಕ್ಷನಾದ ಕೃಷ್ಣನಿಗೆ ಯುದ್ಧದಂಥಾ ವಿಷಮಪರಿಸ್ಥಿತಿಯಲ್ಲಿ ತಂದೊಡ್ಡಿಬಿಡುವ ಸಂದಿಗ್ಧವಾಗಿ; ಹೇಗಾದರೂ ಯುದ್ಧವನ್ನು ನಿರ್ವಹಿಸಲೇಬೇಕಾದ ಕೃಷ್ಣ ತನ್ನ ವೀರನಿಗೆ ಕೊಡುವ motivational counselling ಆಗಿ ಶುರುವಾಗುತ್ತದೆ, ಈ ಪ್ರಸಂಗ. ಕತೆಯ ಓಟದಲ್ಲಿ ಈ ಕ್ಷಣಕ್ಕೆ ಕೃಷ್ಣ ಕೇವಲ ಒಬ್ಬ war-lord ಅಷ್ಟೇ; ಯುದ್ಧ ನಡೆಯುವುದಷ್ಟೇ ಮುಖ್ಯ. ಆದರೆ ಮುಖ್ಯಪಾತ್ರಧಾರಿಯೇ ಹೀಗೆ ಕೈಕೊಟ್ಟರೆ ಯುದ್ಧ ನಿರ್ವಹಿಸಬೇಕಾದ ಕೃಷ್ಣನ ಕತೆಯೇನು? ಕೈಕಾಲು ಕುಸಿದು ಶೋಕಸಂವಿಘ್ನಮಾನಸನಾಗಿ ಕಣ್ಣೀರಿಡುತ್ತಾ ಕುಳಿತ ಅರ್ಜುನನಿಗೆ ಕೃಷ್ಣ ಹೇಳುವುದನ್ನು ನೋಡಿ: "ಕುತಸ್ತ್ವಾ ಕಶ್ಮಲಮಿದಂ, ವಿಷಮೇ ಸಮುಪಸ್ಥಿತಂ?"

"ಅರ್ಜುನಾ, ಕೊನೇಕ್ಷಣದಲ್ಲಿ ಇದೇನಯ್ಯ ವಿಪರೀತ - ಮರ್ಯಾದಸ್ತರಿಗೆ ಒಗ್ಗದ, ಸ್ವರ್ಗಕ್ಕೆ ಸಲ್ಲದ, ನಾಚಿಕೆಗೇಡಿನ ಯೋಚನೆ?" (ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಂ - ಅನಾರ್ಯಜುಷ್ಟಮಸ್ವರ್ಗ್ಯಂ ಅಕೀರ್ತಿಕರಮರ್ಜುನ?). ಒಬ್ಬ typical floor managerನ ಮಾತಲ್ಲವೇ ಇದು? ಈ ಕ್ಷಣಕ್ಕೆ ಅರ್ಜುನನ ಆತ್ಯಂತಿಕ ಕರ್ತವ್ಯ ಯುದ್ಧ - ಐಹಿಕ, ಆಧ್ಯಾತ್ಮಿಕ ದೃಷ್ಟಿಗಳೆರಡರಲ್ಲೂ; ಇದು ಕೃಷ್ಣನಿಗೆ ತಿಳಿದಿದೆ. ಅರ್ಜುನನಿಗೆ ಅದು ತಿಳಿದಿದೆಯೋ ತಿಳಿದಿಲ್ಲವೋ, ಒಟ್ಟಿನಲ್ಲಿ ಅವನು ಯುದ್ಧ ಮಾಡಬೇಕು, ಅಷ್ಟೇ. ಅದಕ್ಕೆಂದೇ ಈ ಹಂತದಲ್ಲಿ ಕೃಷ್ಣ ಯಾವ ತತ್ತ್ವೋಪದೇಶದಲ್ಲೂ ತೊಡಗುವುದಿಲ್ಲ. "What non-sense are you doing?" ಅನ್ನುವಂಥ ಐಹಿಕಮಟ್ಟದ ಗದರಿಕೆಗಳಿಂದ ಅರ್ಜುನ ಜಗ್ಗುವುದಾದರೆ ಜಗ್ಗಿಬಿಡಲಿ, ಇದು ಕೃಷ್ಣನ ಹಂಚಿಕೆ. ಇದೇ ಧೋರಣೆಯಲ್ಲೇ ಮುಂದುವರೆದು ಹೇಳುತ್ತಾನೆ ಕೃಷ್ಣ "ಪಾರ್ಥಾ, ಷಂಡತನ ನಿನಗೆ ಹೇಳಿದ್ದಲ್ಲ, ಈ ಕ್ಷುದ್ರವಾದ ಹೃದಯದೌರ್ಬಲ್ಯವನ್ನು ಬಿಟ್ಟು ಎದ್ದೇಳು" (ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ ತ್ವಯ್ಯುಪಪದ್ಯತೇ, ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ)

ಆದರೆ ಅರ್ಜುನ ಅಷ್ಟಕ್ಕೆಲ್ಲ ಜಗ್ಗುವ ಪಿಂಡವಲ್ಲ. ಆದ್ಯಂತ ಕರ್ತವ್ಯಪರಾಯಣನಾದ ಅರ್ಜುನ, ತನಗಲ್ಲದ ಕೆಲಸವನ್ನು ಹೇಗೆತಾನೆ ಮಾಡಿಯಾನು, ಅದೂ ಹಾಗೆ ಮಾಡಬಾರದೆಂಬ ನಿಚ್ಚಳ ಅರಿವು ತನ್ನಲ್ಲಿರುವಾಗ? ತನ್ನ ಸಂದಿಗ್ಧವನ್ನು ಈಗಾಗಲೇ ಬಿಡಿಸಿ ಬಿಡಿಸಿ ಹೇಳಿಯಾಗಿದೆ; ತನ್ನ ಅಭಿಪ್ರಾಯವನ್ನು ಬದಲಿಸುವ ಸಮಾಧಾನಗಳೊಂದೂ ಕಾಣುತ್ತಿಲ್ಲ; ತಾನು ಈ ಕ್ಷಣ ತಳೆದಿರುವ ನಿಲುವು ಹೇಡಿತನದ್ದಲ್ಲವೆಂದು ತನ್ನಷ್ಟೇ ಕೃಷ್ಣನಿಗೂ ಗೊತ್ತಿದೆ, ಮತ್ತೆ ಹೇಡಿತನದ ಮಾತೇಕೆ? ಕೇವಲ ಇವನ ಅವಹೇಳನಕ್ಕಂಜಿ ಬಂಧುಹತ್ಯೆಯಂಥ ಪಾಪಕಾರ್ಯಕ್ಕೆ ಕೈಹಾಕಬೇಕೇ? ಅದಕ್ಕೆಂದೇ ತಾನು ಮೊದಲು ಹೇಳಿದ್ದನ್ನೇ ಮತ್ತೆ ಹೇಳುತ್ತಾನೆ ಅರ್ಜುನ. "ಪೂಜ್ಯರಾದ ಭೀಷ್ಮ-ದ್ರೋಣರನ್ನು ಹೇಗೆತಾನೆ ಹೊಡೆಯಲಿ? ಅಂಥ ಮಹಾನುಭಾವರನ್ನು ಕೊಂದು ಅವರ ರಕ್ತದಲ್ಲಿ ತೊಯ್ದ ರಾಜ್ಯಭೋಗಗಳನ್ನು ಅನುಭವಿಸುವುದಕ್ಕಿಂತ ಭಿಕ್ಷೆಯೆತ್ತಿ ಬದುಕುವುದು ಲೇಸಲ್ಲವೇ?"

ಇದನ್ನು ಹೇಳುವಾಗ, ಇದೆಲ್ಲ ಕೃಷ್ಣನಿಗೆ ತಿಳಿಯದ್ದೇನಲ್ಲವೆಂಬ ಅರಿವು ಅರ್ಜುನನಿಗಿದೆ. ಅಷ್ಟಾಗಿಯೂ ಕೃಷ್ಣನು ತನ್ನನ್ನು ಯುದ್ಧಮಾಡಲೇಬೇಕೆಂದು ಒತ್ತಾಯಿಸುತ್ತಿರುವುದರಲ್ಲಿ ಏನೋ ಅರ್ಥವಿರಬೇಕೆಂದೂ ಅನಿಸುತ್ತಿದೆ. ಪಾಂಡವರೇ ತನ್ನ ಪ್ರಾಣವೆಂದಿರುವ ಕೃಷ್ಣನ ಮಾತಿನಲ್ಲಿ ಕಪಟವೇನೂ ಇರಲಾರದು. ಹಾಗಿದ್ದರೆ ಅವನು ಹೇಳುತ್ತಿರುವುದೇ ಸರಿಯೇ? ಯುದ್ಧದ ಕೆಡುಕನ್ನು ತಾನು ಇಷ್ಟುಬಗೆಯಾಗಿ ವಿವರಿಸಿದಮೇಲೂ ಕೃಷ್ಣ ತೋರುವ ಈ ಸ್ಥಿರತೆ (conviction) ಅರ್ಜುನನ್ನು ಗೊಂದಲಗೊಳಿಸುತ್ತದೆ. ಈಗ ತನಗೆ ಯಾವುದು ಹೆಚ್ಚು, ಯಾವುದು ಸರಿ, ಯುದ್ಧದಲ್ಲಿ ತಾವು ಗೆಲ್ಲುತ್ತೇವೋ ಕೌರವರೋ ಒಂದೂ ತಿಳಿಯದಾಗಿದೆ. ಯಾವ ಕೌರವರನ್ನು (ತಮ್ಮಂದಿರನ್ನು) ತಾನು ಕೊಂದು ಬದುಕಲಿಚ್ಛಿಸುವುದಿಲ್ಲವೋ ಅವರೇ ಈಗ ಎದುರುನಿಂತಿದ್ದಾರೆ; ಕೃಷ್ಣನೋ ಯುದ್ಧಮಾಡೆಂದು ಒತ್ತಾಯಿಸುತ್ತಿದ್ದಾನೆ; ಇದೆಲ್ಲದರ ಗಲಿಬಿಲಿಯಿಂದ ದಿಙ್ಮೂಢನಾಗಿ ಅರ್ಜುನ ಕೊನೆಗೆ ಕೈಮುಗಿದುಬಿಡುತ್ತಾನೆ - "ಕೃಷ್ಣಾ, ನಿನಗೆ ಶರಣುಬರುತ್ತೇನೆ, ನಿನ್ನ ಶಿಷ್ಯ ನಾನು; ಇದೆಲ್ಲ ಗೊಂದಲದಿಂದ ನನಗಂತೂ ದಿಕ್ಕುತೋರದಂತಾಗಿದೆ, ಧರ್ಮಬುದ್ಧಿಗೆ ಮಂಕುಕವಿದಿದೆ. ಯಾವುದು ಧರ್ಮಸಮ್ಮತವೋ, ಯಾವುದು ಶ್ರೇಯಸ್ಕರವೋ ಅದನ್ನೊಂದು ನಿಶ್ಚಯಿಸಿ ನನಗೆ ಹೇಳಿಬಿಡು ಮಹಾರಾಯ; ನನಗಂತೂ ದೇವಲೋಕದ ಒಡೆತನವೇ ಬಂದರೂ, ನನ್ನ ಶತ್ರುಗಳೆಲ್ಲಾ ನಿರ್ನಾಮವಾಗಿಹೋದರೂ ಮೈಮನಗಳನ್ನೆಲ್ಲಾ ಸೋಸಿಬಿಡುತ್ತಿರುವ ಈ ನೋವಿನಿಂದ ಬಿಡುಗಡೆಯೇ ಇಲ್ಲವೆನ್ನಿಸುತ್ತದೆ"

ಇಷ್ಟುಹೇಳಿ "ಇಲ್ಲಪ್ಪಾ, ನಾನಂತೂ ಯುದ್ಧಮಾಡಲಾರೆ" ಎಂದು ಸುಮ್ಮನಾಗುತ್ತಾನೆ, ಅರ್ಜುನ.

Monday, August 9, 2010

ಸೇನಯೋರುಭಯೋರ್ಮಧ್ಯೇ...

"ಕೌರವರ(ನ) ಹುಟ್ಟಿನಿಂದ ಹಿಡಿದು ಇಂದಿನವರೆಗೆ, ಕೌರವ-ಪಾಂಡವರ ಬದುಕು ರೂಪಿಸುತ್ತಾ, ಕೌರವ ಪಾಂಡವರನ್ನೂ ಒಳಗೊಂಡಂತೆ ಹದಿನೆಂಟು ಅಕ್ಷೋಹಿಣಿಯ ಮಹಾಸೇನೆಯನ್ನು ಇಂದು ಈ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಿಯೋಜಿಸಲು ಕಾರಣವಾದ ಘಟನೆಗಳೆಲ್ಲದರ ಪಡಿನೆಳಲು ಇವತ್ತು ಇಡೀ ಯುದ್ಧಭೂಮಿಯನ್ನು ಆವರಿಸಿದೆ, ಮುಂದಿನ ಮಹಾವಿಪತ್ತಿನ ವಿಷಾದಪೂರ್ಣವಾದ ಮುನ್ನುಡಿಯೆಂಬಂತೆ" ಎಂದೆ. ಹೌದೇ?

ಮುಂದೆ ಬರುವುದು ನಿಜಕ್ಕೂ ಮಹಾವಿಪತ್ತೇ? ನಡೆಯಲಿರುವುದು ಧರ್ಮಯುದ್ಧ. ಕೌರವರು ಅಧರ್ಮದಿಂದ ಪಾಂಡವರ ರಾಜ್ಯ ಕಸಿದಿದ್ದಾರೆ, ಅವರನ್ನು ಪಡಬಾರದ ಕಷ್ಟಗಳಿಗೀಡುಮಾಡಿದ್ದಾರೆ, ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅತಿ ನೀಚರೀತಿಯಲ್ಲಿ ಅವಮಾನಿಸಿದ್ದಾರೆ, ಕೊನೆಗೆ ಕಾಡಿಗಟ್ಟಿದ್ದಲ್ಲದೇ ಅಲ್ಲೂ ನೆಮ್ಮದಿಯಿಂದಿರಲು ಬಿಟ್ಟಿಲ್ಲ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಪಾಂಡವರು ತಮ್ಮ ಕರಾರನ್ನು ಪೂರೈಸಿ ಈಗ ಮರಳಿ ಬಂದಿದ್ದಾರೆ, ತಮಗೆ ನ್ಯಾಯವಾಗಿ ಸಲ್ಲಬೇಕಾದ ರಾಜ್ಯವನ್ನು ಕೇಳಿದ್ದಾರೆ, ಅದೂ ಬಲಪ್ರಯೋಗದಿಂದಲ್ಲ, ಸಾಮದಿಂದ, ದಾನದಿಂದ, ಕೊನೆಗೆ ಭೇದದಿಂದ ಕೂಡ. ಅದಾವುದೂ ನಡೆಯದೇ ಕೊನೆಗೆ ದಂಡದ ದಾರಿ ಹಿಡಿದಿದ್ದಾರೆ, ಅದೂ ಏಕಮುಖವಾದ ದಂಡಪ್ರಯೋಗವಲ್ಲ. ಸಂಧಾನ ನಡೆಸಿದ್ದಾರೆ, ಅದು ಫಲಕೊಡದಿದ್ದಮೇಲೆ ಕ್ರಮಬದ್ಧವಾಗಿ ಯುದ್ಧದ ಆಹ್ವಾನ ನೀಡಿದ್ದಾರೆ, ಎರಡೂ ಪಕ್ಷದವರೂ ಭರತಖಂಡದ ಎಲ್ಲ ದೊರೆಗಳೊಡನೆ ರಾಜತಾಂತ್ರಿಕ ಮಾರ್ಗದಲ್ಲಿ ಬೆಂಬಲ ಬೇಡಿದ್ದಾರೆ/ಪಡೆದಿದ್ದಾರೆ. ಭೂಮಿಯ ಒಡೆತನಕ್ಕೆ ಇರುವ ಆತ್ಯಂತಿಕ ಪರೀಕ್ಷೆ, ಯುದ್ಧ. ಯಾರು ತೋಳ್ಬಲದಿಂದ ಭೂಮಿಯನ್ನು ಗೆಲ್ಲುವರೋ ಅವರೇ ಅದರ ಒಡೆಯರು. ಯುದ್ಧವೆಂದಮೇಲೆ ಒಂದುಪಕ್ಷ ಸೋಲುತ್ತದೆ/ನಾಶವಾಗುತ್ತದೆ, ಒಂದುಪಕ್ಷ ಗೆಲ್ಲುತ್ತದೆ, ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಇದರಲ್ಲಿ ಮಹಾವಿಪತ್ತೇನು ಬಂತು?

ಮೇಲ್ನೋಟಕ್ಕೆ ಇದು ಸುಲಭದ, ಸರ್ವ ಸಮ್ಮತ ತರ್ಕ. ಆದರೆ ನೋಡಿ, ಇದು ಯಾರೋ ಬೇರೆ ಜನದ/ಜನಾಂಗದೊಡನಿನ ಯುದ್ಧವಲ್ಲ. ಎದುರಿಸಿ ನಿಂತವರು ಸ್ವಂತ ಅಣ್ಣತಮ್ಮಂದಿರು/ದಾಯಾದಿಗಳು. ಬಂಧುಬಾಂಧವರು, ನೆಂಟರಿಷ್ಟರು. ಇದೇನು ಕಾಡಾಡಿ ಯುದ್ಧವಲ್ಲ, ಮಹಾಯುದ್ಧ. ಇದರಲ್ಲಿ ಎರಡೂ ಕಡೆಯೂ ವಿನಾಶ ಕಾದಿದೆ. ಗೆಲ್ಲುವವರು ಯಾರೇ ಆದರೂ ಉಳಿಯುವವರು ಬೆರಳೆಣಿಕೆ ಮಾತ್ರ. ಸಾಯುವವರು ಕೇವಲ ಶತ್ರುಗಳಲ್ಲ, ಅಲ್ಲದೇ ಶತ್ರುಗಳೂ ಬಾಂಧವರೇ! ಸ್ವಜನ ನಾಶ, ಕುಲಕ್ಷಯ, ಇದು ಇಲ್ಲಿಯ ಅಳಲು. ಸತ್ತವರ ಸಮಾದಿಯೇ ಗೆದ್ದವನ ಸಿಂಹಾಸನ. ಇಂಥ ಸರ್ವನಾಶದಿಂದ ಬರುವ ಸ್ಮಶಾನ ಸದೃಶ ರಾಜ್ಯ ಬೇಕೇ? ಅದಕ್ಕಾಗಿ ಯುದ್ಧ ಬೇಕೇ?

ಮುಂದುವರೆಯುವ ಮೊದಲು ಅದೇಕೋ ರನ್ನನ ದುರ್ಯೋಧನ ನೆನಪಿಗೆ ಬರುತ್ತಾನೆ. ರಾಜ್ಯ ಬೇಡವೆಂದರೂ ಯುದ್ಧ ಬೇಕೇಬೇಕೆನ್ನುತ್ತಾನೆ ಭೂಪ. ಹೆಜ್ಜೆ ಇಟ್ಟದ್ದಾಗಿದೆ, ಹಿಂದೆಗೆಯುವಂತಿಲ್ಲ. ಭೀಷ್ಮ ಶರಶಯ್ಯೆಯ ಮೇಲೆ ಮಲಗಿದ್ದಾನೆ. ಅಸಂಖ್ಯ ಬಾಣಗಳ ವೇದನೆಯ ನಡುವೆಯೂ ಅತ್ತ ಯುದ್ಧಭೂಮಿಯಲ್ಲಿ ಕೌರವನ ಗತಿಯೇನಾಯಿತೋ ಎನ್ನುವ ಕಕ್ಕುಲಾತಿ ವೃದ್ಧಪಿತಾಮಹನಿಗೆ. ಅವನನ್ನು ನೋಡಲು ಬಂದ ಕುರುರಾಯ ತನ್ನ ಛಲದಿಂದ ತಾತನಿಗಾದ ದುರ್ಗತಿಯನ್ನು ಕಂಡು ಕಂಬನಿ ಮಿಡಿಯುತ್ತಿರಲು "ಈಗಲಾದರೂ" ಸಂಧಿ ಮಾಡಿಕೊಂಡು ಪಾಂಡವರೊಡನೆ ರಾಜ್ಯ ಹಂಚಿಕೋ ಎಂದು ಸಲಹೆ ನೀಡುತ್ತಾನೆ ಭೀಷ್ಮ. ಅದಕ್ಕೆ ದುರ್ಯೋಧನನ ಉತ್ತರ ನೋಡಿ. "ನೆಲಕಿರಿವೆನೆಂದು ಬಗೆವಿರೇ ಛಲಕಿರಿವೆಂ... ಪಾಂಡುಸುತರೊಳೀನೆಲನಿದು ಪಾಳ್ನೆಲನೆನಗೆ" ಅವನಿಗೆ ಯುದ್ಧ ಬೇಕು, ಆದರೆ ರಾಜ್ಯಕ್ಕಾಗಿಯಲ್ಲ, ಛಲಕ್ಕಾಗಿ. "ಖಂಡಿತಮೆನಿಪ್ಪ ವರಮಹಿಮಂಡಲ ಧವಳಾತಪತ್ರಸಂಪದಮೆನಗೇ ಭಂಡಂ, ಅಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ" ಎನ್ನುವ ದುರ್ಯೋಧನನಿಗೆ ಯುದ್ಧ ಅನಿವಾರ್ಯ, ಇನ್ನೇತಕ್ಕಲ್ಲದಿದ್ದರೂ ಈ ಗಳಿಗೆಯಲ್ಲಿ ಸಂಧಿಯ ಮಾತಾಡಿದರೆ ಭೀಮನ ಮುಂದೆ ತಾನು ಅದೆಷ್ಟು ಕುಗ್ಗಿಹೋದಾನು? "ಬಾಡಮನೈದನವರ್ ಮುಂಬೇಡಿದೊಡಾನಿತ್ತೆನಿಲ್ಲ, ರಾಜ್ಯಾರ್ಧಮನಾಂ ಬೇಡಿಯವರಲ್ಲಿಗಟ್ಟಿದೊಡೆ ಏಡಿಸಿ ರೋಡಿಸನೇ ಪವನ ನಂದನನೆನ್ನಂ?" ಅಲ್ಲದೆ, ಸಂಧಿಗೈದು ರಾಜ್ಯವನ್ನು ಉಳಿಸಿಕೊಂಡು ಮಾಡುವುದಾದರೂ ಏನಿದೆ? ಹುಟ್ಟಿದ ನೂರು, ಒಡಹುಟ್ಟಿದ ನೂರು ಮಂದಿ ಆಗಲೇ ಯುದ್ಧದಲ್ಲಿ ಸತ್ತಿದ್ದಾರೆ, ಜೀವದ ಗೆಳೆಯ ಕರ್ಣನಿಲ್ಲ, ಪ್ರೀತಿಯ ತಮ್ಮ ದುಶ್ಶಾಸನನಿಲ್ಲ, ಗುರುವಿಲ್ಲ ಬಂಧುಮಿತ್ರರನ್ನೆಲ್ಲ ಕಳೆದುಕೊಂಡು ರಾಜ್ಯಮಾಡುವುದಾದರೂ ಏನು? ಅದಕ್ಕಾಗಿ ಮಾನಬಿಟ್ಟು ಸಂಧಿಮಾಡಿಕೊಳ್ಳುವುದೇ? "ಪುದುವಾಳಲ್ಕಣಮಾಗದೆಂದುಮವರೊಳ್ ಸಂಧಾನಮಂ ಮಾಡಲಾಗದು ನೀಮಿಲ್ಲದೆಯಜ್ಜ ಬಿಲ್ಲ ಗುರುಗಳ್ ತಾಮಿಲ್ಲದೇ ಕರ್ಣನಿಲ್ಲದೆ ದುಶ್ಶಾಸನನಿಲ್ಲದಾರೊಡನೆ ರಾಜ್ಯಂಗೈವೆನ್... ಆರ್ಗೆ ತೋರಿ ಮೆರೆವೆನ್ ನಾನಾವಿನೋದಂಗಳಂ" ಆದ್ದರಿಂದ ಸಂಧಿಯಿಂದ ಬರುವ ರಾಜ್ಯ ಬೇಡವೆನ್ನುವ ದುರ್ಯೋಧನನಿಗೆ ಯುದ್ಧದಲ್ಲಿ ತಾವು ಸೋಲುವುದು ಖಚಿತವೆಂಬ ಅರಿವಿದೆ. ಆದರೇನಂತೆ? ಗೆದ್ದೇನು ಮಾಡಬೇಕು ಇದು ಅವನ ನಿಲುವು.

ಇರಲಿ, ಇನ್ನು ಮಹಾಭಾರತಕ್ಕೆ ಮರಳಿದರೆ, ಇದೋ ನೋಡಿ, ಅದೇ ಸಂಕಟ ಅರ್ಜುನನದು.

ಎರಡೂ ಕಡೆಯ ವೀರರೂ ತಂತಮ್ಮ ಶಂಖವೂದಿದ್ದಾರೆ, ರಣಭೇರಿ ಬಾರಿಸಿದ್ದಾರೆ. ಯುದ್ಧಾರಂಭಕ್ಕೆ ಸನ್ನೆ ದೊರೆತಾಗಿದೆ. ತಮ್ಮ ರಣಭೇರಿಯನ್ನು ಕೇಳೇ ಎದೆಯೊಡೆದಂತಿದ್ದ ಕೌರವರನ್ನು ನೋಡುತ್ತಾ ಶಸ್ತ್ರಸನ್ನದ್ಧನಾದ ಪಾರ್ಥ ಕೃಷ್ಣನನ್ನು ಕೇಳುತ್ತಾನೆ; "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಕೇಶವ" - ಇವತ್ತು ನನ್ನೊಡನೆ ಯುದ್ಧಮಾಡಲು ನೆರೆದಿರುವ ವೀರರನ್ನು ನೋಡೋಣ; ದುರ್ಬುದ್ಧಿಯಾದ ಕೌರವನಿಗೆ ಯುದ್ಧದಲ್ಲಿ ಪ್ರಿಯವನ್ನುಂಟುಮಾಡಲು ಯಾರುಯಾರು ನೆರೆದಿದ್ದಾರೆ ನೋಡೋಣ, ರಥವನ್ನು ತೆಗೆದುಕೊಂಡು ಹೋಗಿ ಎರಡೂ ಸೈನ್ಯಗಳ ಮಧ್ಯೆ ನಿಲ್ಲಿಸು.

ಸರಿ, ರಥವನ್ನು ಕೊಂಡೊಯ್ದು ಉಭಯಸೈನ್ಯದ ಮಧ್ಯೆ ನಿಲ್ಲಿಸುತ್ತಾನೆ ಪಾರ್ಥಸಾರಥಿ. "ದುರ್ಬುದ್ಧಿಯಾದ ಕೌರವನಿಗೆ ಯುದ್ಧದಲ್ಲಿ ಪ್ರಿಯವನ್ನುಂಟುಮಾಡಲು ಯಾರುಯಾರು ನೆರೆದಿದ್ದಾರೆ ನೋಡೋಣ" ಎಂದು ವ್ಯಂಗ್ಯವಾಡಿಕೊಂಡು ಬಂದ ಅರ್ಜುನನಿಗೆ ಅಲ್ಲಿ ಕಂಡದ್ದೇನು? ಭೀಷ್ಮ-ದ್ರೋಣರೇ ಮೊದಲಾಗಿ ಅಲ್ಲಿ ನೆರೆದಿದ್ದ ತನ್ನದೇ ಜನಸಮೂಹ - ತಂದೆಯರು, ತಾತಂದಿರು, ಆಚಾರ್ಯರು, ಸೋದರ ಮಾವಂದಿರು, ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಮಾವಂದಿರು ಹೀಗೆ ಎರಡೂ ಕಡೆ ತುಂಬಿದ್ದ ತನ್ನದೇ ಬಂಧುಬಾಂಧವರನ್ನು ನೋಡಿ ಪಾರ್ಥನ ಮನಸ್ಸು ಕರುಣೆಯಿಂದ ಮರಗಟ್ಟಿಹೋಗುತ್ತದೆ. ಮತಿ ಮಾರುತ್ತದೆ. ಮಾತು ಬಡಬಡಿಕೆಯಾಗುತ್ತದೆ. ಕೃಷ್ಣನಿಗೆ ಅನ್ನುತ್ತಾನೆ - "ಇಲ್ಲಿ ಯುದ್ಧೋತ್ಸಾಹಿಗಳಾಗಿ ನೆರೆದಿರುವ ನನ್ನದೇ ಬಂಧುವರ್ಗವನ್ನು ನೋಡಿ ನನ್ನ ಕೈಕಾಲುಗಳು ಕುಂದುತ್ತಿವೆ, ಕೃಷ್ಣಾ, ಬಾಯೊಣಗುತ್ತಿದೆ, ಮೈನಡುಗುತ್ತಿದೆ, ನವಿರೇಳುತ್ತಿದೆ, ಹಿಡಿದ ಬಿಲ್ಲು ಕೈಜಾರುತ್ತಿದೆ, ಮೈಬಿಸಿಯೇರಿ ಕುಸಿಯುವಂತಾಗುತ್ತಿದೆ, ಭ್ರಮೆ ಹಿಡಿದ ಬುದ್ಧಿಗೆ ಬರೀ ಅಪಶಕುನಗಳೇ ಕಾಣುತ್ತಿವೆ..."

ಇಡೀ ಯುದ್ಧದ ಸನ್ನಿವೇಶದಲ್ಲಿ ಈ ಸಂದರ್ಭ ಎಷ್ಟು ಔಚಿತ್ಯ ಪೂರ್ಣವಾಗಿ ಬಂದಿದೆ ಹಾಗೂ ಅದೆಷ್ಟು ನಾಟಕೀಯವಾಗಿ ಚಿತ್ರಿತವಾಗಿದೆ ನೋಡಿ. ಮೊದಲೇ ಹೇಳಿದಂತೆ, ಮುಂಬರುವ ಗೀತೆಯ ಬೆಳಕಿಗೆ ಬಹು ಔಚಿತ್ಯಪೂರ್ಣ ಹಿನ್ನೆಲೆ ವಿಷಾದ. ಇಡೀ ಭಾರತದ ಕತೆಯಲ್ಲಿ ಪಡಿನೆಳಲಾಗೇ ಬರುವ ವಿಷಾದ ಅಂದು ಅರ್ಜುನನಲ್ಲಿ ಹರಳುಗಟ್ಟುತ್ತದೆ. ಯುದ್ಧಸನ್ನದ್ಧವಾದ ಮಹಾಸೇನೆಯ ಮುಂದೆ ನಡೆಯುವ ಈ high drama ಮುಂಬರುವ ಗೀತಾಪ್ರವಚನಕ್ಕೆ ಅತ್ಯುತ್ತಮ curtain-raiser ಆಗಿ ಕೆಲಸ ಮಾಡುತ್ತದೆ. ಹಾಗೆ ನೋಡಿದರೆ, ಈ high drama ಇಲ್ಲದಿದ್ದರೆ ಅಷ್ಟುದ್ದದ ಗೀತೆಯ ಉಪದೇಶವೇ ಅಪ್ರಸ್ತುತವಾಗಿಬಿಡುತ್ತದೆ. ಸಾಮಾನ್ಯ ಯುದ್ಧದ ಸಂದರ್ಭವನ್ನು ಮೇಲೆತ್ತಿ ಗೀತಾಪ್ರಸ್ಥಾನಕ್ಕೊಂದು ವೇದಿಕೆ ಕಲ್ಪಿಸುತ್ತದೆ ಅರ್ಜುನನ ಈ ತಳಮಳ. ಇದು ಈ ಪ್ರಸಂಗದ ತಾಂತ್ರಿಕ ಔಚಿತ್ಯ. ಇನ್ನು ಕತೆಯ ನಡೆಯಲ್ಲಿ ಇದಕ್ಕೊಂದು ಔಚಿತ್ಯವಿದೆಯೇ? ಪಾಂಡವರಿಗೆ ಈ ಯುದ್ಧ ಯಥಾಸಹಜವಾದ ಆಯ್ಕೆಯಾಗಿರುವಾಗ, ಅದರಲ್ಲೂ ಕೌರವನೇ ಸಂಧಿಯನ್ನು ನಿರಾಕರಿಸಿರುವಾಗ, ಅದೂ ತಿಂಗಳುಗಟ್ಟಳೆ ಪಾಂಡವರೂ ಸಮರ ಸನ್ನಾಹ ನಡೆಸಿಯೇ ಇಂದು ಇಲ್ಲಿ ಬಂದು ನಿಂತಿರುವಾಗ ತಳಮಳಕ್ಕೆ, ಗೀತೋಪದೇಶಕ್ಕೆ ಎಡೆಯೆಲ್ಲಿ? ಮುಂದೆ ನಡೆಯಬೇಕಾದ್ದೇ ಯುದ್ಧ, ಶತ್ರುನಾಶ, ಜಯ. ತತ್ತ್ವಜಿಜ್ಞಾಸೆ ಮಾಡುವ ಸ್ಥಳವೇ ಯುದ್ಧಭೂಮಿ? ತುಂಬಿದ ಸೈನ್ಯದ ಮುಂದೆ ನಿಂತು ಅರಿಭಯಂಕರನಾದ ಅರ್ಜುನ ತನ್ನ ಮೈನಡುಗುತ್ತಿದೆ, ಕೈಕಾಲು ಕುಸಿಯುತ್ತಿದೆ ಎನ್ನುವುದೆಂದರೇನು, ಅವನಿಗೆ ಕೃಷ್ಣ ತಾಸುಗಟ್ಟಲೆ ಉಪದೇಶ ಮಾಡುತ್ತಾ ನಿಲ್ಲುವುದೇನು? ಉತ್ತರಕುಮಾರನಾದರೆ ಅದು ಬೇರೆ, ಆದರೆ ಅರ್ಜುನನ ವಿಷಯದಲ್ಲಿ ಅದು ಅಸಹಜವಲ್ಲವೇ? ಅದು ಕತೆಯ ಓಟಕ್ಕೆ ಧಕ್ಕೆಯಲ್ಲವೇ?

ಇರಬಹುದೇನೋ, ಆದರೆ ಇಲ್ಲಿ ಗಮನಿಸಬೇಕಾದ್ದೆಂದರೆ ಅರ್ಜುನನ ಹಿಂಜರಿಕೆ ಭಯಜನ್ಯವಲ್ಲ, ತುಮುಲಜನ್ಯ. ಬಹುಶಃ ಭೀಮಕರ್ಮನಾದ ವೃಕೋದರನಿಗಾದರೆ ಅದರ ಅಗತ್ಯವೇ ಬರುತ್ತಿರಲಿಲ್ಲವೇನೋ (ಅವನ ಮನದಲ್ಲಿ ತುಮುಲಕ್ಕೆ ಎಡೆಯಿದ್ದುದೇ ಕಾಣೆ), ಇನ್ನು ಧರ್ಮಾಭ್ಯಾಸಜಡನಾದ ಯುಧಿಷ್ಠಿರನ ಮಾತಂತೂ ಕೇಳುವುದೇ ಬೇಡ. ಆದರೆ ಅರ್ಜುನನ ವಿಷಯ ಹಾಗಲ್ಲ. ಅವನಿಗೆ ಧರ್ಮನ ಧರ್ಮಖಚಿತತೆಯಾಗಲೀ ಭೀಮನ ಮನೋದಾರ್ಢ್ಯವಾಗಲೀ ಇಲ್ಲ. ಮಹಾವೀರ, ಬಹುಕಾರ್ಯಸಮರ್ಥ, ಆದರೂ ಮಾನವಸಹಜ ದೌರ್ಬಲ್ಯಕ್ಕೆ ಹೊರತಲ್ಲ. ಅದೆಂದೂ ಇಲ್ಲದ ತಳಮಳ ಪಕ್ಕನೆ ಅವನನ್ನು ಹಿಡಿದುಬಿಡುವುದು. ಮನುಷ್ಯನ ಮನದಲ್ಲಿ ನಡೆಯುವ ನಿರಂತರ ತಾಕಲಾಟದ ಪ್ರತಿನಿಧಿ ಅರ್ಜುನ. ಅದಕ್ಕೇ ಕೃಷ್ಣ ಗೀತೆಯನ್ನು ಹೇಳಬೇಕಾಗಿಬಂದದ್ದು ಅರ್ಜುನನಿಗೆ. ಭಾರತದುದ್ದಕ್ಕೂ ವ್ಯಾಸರದೊಂದು ವಿಶಿಷ್ಟ ತಂತ್ರಗಾರಿಕೆಯನ್ನು ಕಾಣುತ್ತೇವೆ. ಯಾವ ಪಾತ್ರ ಯಾವಾಗ ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತದೆ. ಅದರಿಂದ ಆಗುವ ಪರಿಣಾಮವೇ ಕತೆಯನ್ನು ಬೆಳೆಸಿಕೊಂಡುಹೋಗುತ್ತದೆ. ಅದರಮೂಲಕ ಮಹತ್ತಾದ್ದನ್ನೇನೋ ಹೇಳುತ್ತಾರೆ ವ್ಯಾಸರು. ಸತ್ಯವತಿಯ ಮೋಹಕ್ಕೆ ಬಿದ್ದು ಶಂತನು ಮಗನ ತ್ಯಾಗವನ್ನು ಅಪೇಕ್ಷಿಸಬಾರದಿತ್ತು, ವಂಶವೇ ನಿಂತುಹೋದಾಗಲೂ ಭೀಷ್ಮ ತನ್ನ ಪ್ರತಿಜ್ಞೆಗೇ ಕಟ್ಟುಬಿದ್ದು ತನ್ನ ಹೊಣೆಯನ್ನು ಉಪೇಕ್ಷಿಸಬಾರದಿತ್ತು ಎಂಬುದರಿಂದ ಹಿಡಿದು, ಉದ್ದಕ್ಕೂ... ಅವಿವಾಹಿತಳಾದ ಕುಂತಿ ಆ ಸೂರ್ಯಮಂತ್ರವನ್ನು ಪರೀಕ್ಷಿಸಬಾರದಿತ್ತು, ಕರ್ಣ ತಾಯಿಗೆ ಮಾತುಕೊಡಬಾರದಿತ್ತು, ದಾಸೀಪುತ್ರನಾದ ವಿದುರ ಜ್ಞಾನಿಯಾಗಿರಬಾರದಿತ್ತು, ಮಹಾಜ್ಞಾನಿಯಾದ ಧರ್ಮಜ ಜೂಜಾಡಬಾರದಿತ್ತು, ಧರ್ಮಜ್ಞರಾದ ಭೀಷ್ಮ-ದ್ರೋಣರು ಅಧರ್ಮಿಗಳಾದ ಕೌರವರ ಪಕ್ಷವಹಿಸಬಾರದಾಗಿತ್ತು... ಹೀಗೇ ಪಟ್ಟಿ ಬೆಳೆಯುತ್ತದೆ. ಅದರೊಡನೆ ಅದರ ಕೆಡುಕೂ, ಕತೆಯೂ. ಅದಾಗದಿದ್ದರೆ ಕತೆಯ ದಿಕ್ಕೇ ತಪ್ಪುತ್ತದೆ, ಕತೆಯೇ ನಿಲ್ಲುತ್ತದೆ. ಇಡೀ ಭಾರತ ಕತೆಯೇ ಒಂದು ಪ್ರಯೋಗಾಲಯದಂತೆಯೂ, ವ್ಯಾಸರು ಪರಸ್ಪರ ವಿರುದ್ಧ ಪದಾರ್ಥಗಳನ್ನು ಪ್ರಣಾಳದಲ್ಲಿ ಕಲೆಸಿ ಅದರ ಪರಿಣಾಮಗಳನ್ನು ಈಕ್ಷಿಸುವ ವಿಜ್ಞಾನಿಯಂತೆಯೂ ಕಾಣುತ್ತಾರೆ. ಇದರದೇ ಮುಂದುವರಿಕೆ, ತತ್ತ್ವಜಿಜ್ಞಾಸೆ ಮಾಡಬಾರದ ಯುದ್ಧಭೂಮಿಯಲ್ಲಿ ಅರ್ಜುನ ತತ್ತ್ವಜಿಜ್ಞಾಸೆಗೆ ಬಿದ್ದುದು. ಹಾಗೆಂದು ಅದೇನು ಯುದ್ಧ ಮಾಡಲಾರದ ಅಂಜಿಕೆಯಿಂದ ಬಂದದ್ದಲ್ಲ. ರಣಭೂಮಿಯಲ್ಲಿ ಹೀಗೆ ಕೈಕಾಲು ಕುಸಿದು ಕುಳಿತವನು ಉತ್ತರಕುಮಾರನಲ್ಲ, ಅರಿಭಯಂಕರನಾದ ಅರ್ಜುನ. ಅರಿಭಯಂಕರನಾದರೂ, ಅನೇಕ ಯುದ್ಧಗಳನ್ನು ಕಂಡಿದ್ದರೂ ಅರ್ಜುನನಿಗೆ ಈ ಮಹಾಯುದ್ಧ ಹೊಸದೇ, ವಿಶಿಷ್ಟವೇ. ಯುದ್ಧದಲ್ಲಿ ಸ್ವಜನರನ್ನು ಎದುರಿಸಬೇಕಾಗುತ್ತದೆ, ಕೊನೆಗೆ ಗುರುವನ್ನೂ ತಾತನನ್ನೂ ಹೊಡೆಯಬೇಕಾಗುತ್ತದೆಯೆಂಬ ಸತ್ಯ ಅರ್ಜುನನಿಗೆ ತಿಳಿಯದ್ದೇನಲ್ಲ. ಆದರೆ ಅದೆಂದೂ ಅವನ ಮನಸ್ಸಿನಾಳಕ್ಕೆ ಇಳಿದದ್ದಿಲ್ಲ; ಕಟು ವಾಸ್ತವವಾಗಿ ಎದೆ ತಟ್ಟಿದ್ದಿಲ್ಲ. ಇದುವರೆಗೂ ಯುದ್ಧದ ಮಾತುಗಳು, ತಲೆ ಚೆಂಡಾಡುವ, ತೊಡೆ ಮುರಿಯುವ, ಎದೆ ಬಗೆಯುವ ಘೋರ ಪ್ರತಿಜ್ಞೆಗಳು ಕೇವಲ ಮಾತಿನ ಮಟ್ಟದಲ್ಲಿದ್ದುವೇ ಹೊರತು, ಕೃತಿಯ ಮಟ್ಟದಲ್ಲಿ, ಕುಲಕ್ಷಯದ ಘೋರ ದುರಂತದ ರೂಪದಲ್ಲಿ ಅರ್ಜುನನ ಮನಸ್ಸಿನಲ್ಲಿ ಮೂಡಿದ್ದೇ ಇಲ್ಲ. "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಕೇಶವ" ಎಂದು ಕೇಳಿ ರಥವನ್ನು ಅಲ್ಲಿ ತೆಗೆದುಕೊಂಡು ಹೋಗುವ ಕ್ಷಣ ಇದೆಯಲ್ಲ, ಅದು ಮಾತು-ಕೃತಿಗಳ ಮುಖಾಮುಖಿ, ಕಂಡರಿಯದ, ಕಲ್ಪಿಸಿರದ ದುರಂತ ಧುತ್ತನೆ ಇದಿರಾದಾಗ ಸಹಜವಾಗಿ ಉಂಟಾಗುವ ವಿಪ್ಲವ, ಅತ್ಯಂತ ಸಹಜವಾದ ಈ ತುಮುಲವನ್ನು, ಅರ್ಜುನ ಅದೆಷ್ಟು ಸೊಗಸಾಗಿ ತರ್ಕಬದ್ಧವಾಗಿ ಮಂಡಿಸುತ್ತಾನೋ ನೋಡಿ. ಸ್ವಾರಸ್ಯಕರವಾದ ಈ ಭಾಗವನ್ನು ಹಾಗೆಯೇ ಭಾವಾನುವಾದ ಮಾಡಿ ಹಾಕುತ್ತೇನೆ:

"ಯುದ್ಧದಲ್ಲಿ ಸ್ವಜನರನ್ನು ಕೊಲ್ಲುವುದು ನನಗಂತೂ ಶ್ರೇಯಸ್ಕರವೆನ್ನಿಸುವುದಿಲ್ಲ. ಕೃಷ್ಣಾ, ನನಗೆ ಈ ವಿಜಯವೂ ಬೇಡ, ರಾಜ್ಯಸುಖಭೋಗಗಳೂ ಬೇಡ; ಯಾರ ಸುಖಕ್ಕೋಸ್ಕರ ಈ ಭೋಗ ಐಶ್ವರ್ಯವನ್ನೆಲ್ಲಾ ಸಂಪಾದಿಸಬಯಸುತ್ತೇವೋ ಅದೇ ತಂದೆ, ಮಕ್ಕಳು, ಬಂಧು-ಬಳಗವನ್ನು ಕೊಂದು ಪಡೆಯುವ ಈ ರಾಜ್ಯದಿಂದ ಪ್ರಯೋಜನವಾದರೂ ಏನು. ಯಾವ ಪ್ರೀತಿಗೋಸ್ಕರ ಕೌರವರನ್ನು ಕೊಲ್ಲಬೇಕು ನಾನು? ಈ ಭೂಮಿಯಲ್ಲ, ಮೂರುಲೋಕದ ಒಡೆತನ ದಕ್ಕೀತೆಂದರೂ ನಾನಂತೂ ಕೌರವರನ್ನು ಕೊಲ್ಲಲಾರೆ. ಮತ್ತೂ ನಮ್ಮವರನ್ನು ಕೊಲ್ಲುವುದರಿಂದ ಪಾಪವೇ ಬಂದೀತಲ್ಲದೇ ಸಂತಸವೇನಾದರೂ ದಕ್ಕೀತೇ? ಅವರೇನೋ ದುರಾಶೆಯವರು, ತಾವು ಮಾಡುತ್ತಿರುವ ಅನಾಹುತವನ್ನು ಕಾಣದೇ ನಮ್ಮ ಮೇಲೆ ಯುದ್ಧಕ್ಕೆ ನಿಂತಿದ್ದಾರೆ, ಆದರೆ ನಾವು, ಮುಂದಾಗಲಿರುವ ಘೋರ ವಿಪತ್ತನ್ನು ಕಂಡೂ ಅವರಂತೆಯೇ ಕುಲಕ್ಷಯದ ಕಾರ್ಯಕ್ಕೆ ಕೈಹಾಕಬೇಕೇ?

"ಕುಲಕ್ಷಯದಿಂದ ಸನಾತನ ಕುಲಧರ್ಮ ನಷ್ಟವಾಗುವುದು; ಧರ್ಮನಷ್ಟವಾಗುವುದರಿಂದ ಅಧರ್ಮವೇ ಎಲ್ಲೆಲ್ಲೂ ನೆಲೆಗೊಳ್ಳುವುದು. ಅಧರ್ಮವು ತುಂಬಿದಾಗ ಕುಲಸ್ತ್ರೀಯರು ಕೆಡುವರು, ಗೋಪಾಲಾ, ಹೀಗೆ ಕುಲಸ್ತ್ರೀಯರು ಕೆಟ್ಟಾಗ ವರ್ಣಸಂಕರವಾಗುವುದು, ಕುಲಕ್ಕೆ ಕುಲವೇ ನಾಶವಾಗುವುದು, ಪಿತೃಗಳು ಪಿಂಡೋದಕಗಳಿಲ್ಲದೇ ನರಕಕ್ಕೆ ಬೀಳುವರು; ಈ ಸಂಕರದೋಷದಿಂದ ಹುಟ್ಟಿದ ವ್ಯಕ್ತಿ ಕುಲಧರ್ಮ ಜಾತಿಧರ್ಮಗಳಿಂದ ಶಾಶ್ವತವಾಗಿ ಬಾಹಿರನಾಗುವನು; ಹೀಗೆ ಧರ್ಮಭ್ರಷ್ಟನಾದ ಮನುಷ್ಯ ಶಾಶ್ವತವಾಗಿ ನರಕದಲ್ಲಿ ನೆಲೆಸುವನು.

"ಅಹಾ! ಕೇವಲ ರಾಜ್ಯಸುಖದ ಆಶೆಗೆ ಸಿಕ್ಕಿ ನಮ್ಮ ಬಂಧುಗಳನ್ನೇ ಕೊಲ್ಲುವ ಮಹಾಪಾಪವನ್ನೆಸಗಲು ಹೊರಟಿದ್ದೇವಲ್ಲ! ಇದಕ್ಕಿಂತಾ ರಣಭೂಮಿಯಲ್ಲಿ ನಿರಾಯುಧನಾಗಿ, ಪ್ರತೀಕಾರವಿಲ್ಲದೇ ಕುಳಿತ ನನ್ನನ್ನು ಕೌರವರು ಕೊಂದು ಕಳೆಯುವುದೇ ಎಷ್ಟೋ ಲೇಸು"

ಇಷ್ಟು ಹೇಳಿದ ಅರ್ಜುನ ತನ್ನ ಬಿಲ್ಲು ಬಾಣಗಳನ್ನು ಬಿಸುಟು ದುಃಖಭರಿತನಾಗಿ ರಥದಲ್ಲಿ ಕುಳಿತುಬಿಡುತ್ತಾನೆ

ಮುಂದೇನು???

Monday, October 6, 2008

ಬೇವು ಬಿತ್ತಿ ಮಾವು ಬೆಳೆವ...

ಭೀಷ್ಮಪ್ರತಿಜ್ಞೆಯಂಥಾ ಒಂದು ಪ್ರತಿಜ್ಞೆ ಇಡೀ ಭಾರತದ ದುರಂತಕ್ಕೆ ಹೇಗೆ ಕಾರಣವಾಯಿತು ನೋಡಿ. ಶಂತನುವಿನ ಮಗ ಭೀಷ್ಮ, ಭರತಾನ್ವಯದ ಒಂದೇ ಕುಡಿ, ಚಕ್ರಾಧಿಪತ್ಯಕ್ಕೆ ನಿಜವಾದ ವಾರಸುದಾರ. ಗಂಗೆಯಿಂದ ಪರಿತ್ಯಕ್ತನಾದ ತಂದೆ ಬೇರೊಂದು ಹೆಣ್ಣನ್ನು ಬಯಸಿದ. ತನ್ನನ್ನು ಮದುವೆಯಾಗಬೇಕಾದರೆ ಮುಂದೆ ತನ್ನ ಮಗನೇ ದೊರೆಯಾಗಬೇಕೆಂಬ ಮತ್ಸ್ಯ(ಯೋಜನ)ಗಂಧಿಯ ಶರತ್ತಿಗೆ ಸ್ವತಃ ತಂದೆ, ಸಕಲ ಸಮರ್ಥನಾದ ಮಗನ ಬದುಕನ್ನೇ ಬಲಿ ಬೇಡಿದ! ಮಗ ನೀಡಿದ; ಕೇವಲ ರಾಜ್ಯತ್ಯಾಗವಲ್ಲ, ತಾನು ಮದುವೆಯಾದರೆ ತನ್ನ ಮಕ್ಕಳು ಸಹಜವಾಗೇ ಸಿಂಹಾಸನಕ್ಕೆ ಹಕ್ಕುದಾರರಾಗುವುದರಿಂದ ತಾನು ಮದುವೆಯನ್ನೂ ಆಗೆನೆಂದು ಶಪಥ ತೊಟ್ಟ, ದೇವವ್ರತ. ತಂದೆ ಕೇಳಿದ, ಮಗ ಕೊಟ್ಟ (ಯಯಾತಿ-ಪುರುವಿನ ಪ್ರಸಂಗ ನೆನಪಿಗೆ ಬಂತೇ, ಅದು ಚಂದ್ರ ವಂಶದ ಕಟ್ಟಳೆಯೇನೋ!). ಸಿಂಹಾಸನ ಬಿಟ್ಟವನು ಬಿಟ್ಟ, ಮುಂದೆ ಯೋಗಾಯೋಗದಿಂದ ಯೋಜನಗಂಧಿ ಸತ್ಯವತಿಯ ಮಗ ವಿಚಿತ್ರವೀರ್ಯ ಹತನಾಗಿ ರಾಜ್ಯ ಅನಾಥವಾದಾಗ ಭೀಷ್ಮ ಮತ್ತೆ ರಾಜ್ಯಾಧಿಕಾರವನ್ನು ಕೈಗೆತ್ತಿಕೊಳ್ಳಬೇಕಿತ್ತು, ಅದು ಅವನ ಜವಾಬ್ದಾರಿಯಾಗಿತ್ತು ಕೂಡ. ಆದರೆ ತನ್ನ ಭೀಷ್ಮಪ್ರತಿಜ್ಞೆಗೇ ಅಂಟಿಕೊಂಡ, ಸತ್ಯವ್ರತನಾದ ದೇವವ್ರತ!

ಅದಿರಲಿ, ಮುಂದೆ ಧೃತರಾಷ್ಟ್ರನ ಅಂಧಾಡಳಿತದಲ್ಲಿ ಕೌರವ ರಾಜಕುವರರ ಸ್ವೇಚ್ಛಾಚಾರ ಮಿತಿಮೀರಿದಾಗ ಭೀಷ್ಮನೇ ಮೊದಲಾಗಿ, ದ್ರೋಣ, ವಿದುರ ಮುಂತಾದ ಹಿರಿಯರೆಲ್ಲರೂ ತಮ್ಮ ಶಕ್ತಿಮೀರಿ ದುರ್ಯೋಧನನಿಗೆ ಬುದ್ಧಿ ಹೇಳುತ್ತಾರೆ; ಇತರ ಹಿರಿಯರ ಮಿತಿ ಅಷ್ಟೇ ಇರಬಹುದು, ಆದರೆ ಭೀಷ್ಮ (ಯಾರ 'ತ್ಯಾಗ' ವಿಚಿತ್ರವೀರ್ಯನ ನಿಯೋಗೀ ಸಂತತಿಯನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿತ್ತೋ ಆ ಭೀಷ್ಮ) ಖಂಡಿತ ಬುದ್ಧಿ ಹೇಳುವುದಕ್ಕಿಂತಾ ಒಂದು ಹೆಜ್ಜೆ ಮುಂದೆ ಹೋಗಲು ಸಾಧ್ಯವಿತ್ತು; ಅಧರ್ಮಿಗಳಾದ ಧೃತರಾಷ್ಟ್ರ ಪುತ್ರರನ್ನು ಕಿತ್ತೊಗೆದು ರಾಜ್ಯಾಧಿಕಾರವನ್ನು ಕೈಗೊಳ್ಳಬಹುದಿತ್ತು (ಅಥವಾ ಅದಕ್ಕೆ ಪ್ರತಿಜ್ಞೆ ಅಡ್ಡ ಬರುವುದಾದರೆ, ತನ್ನದೇ ಮನೋಗತದಂತೆ ಅದನ್ನು ಪಾಂಡವರಿಗೆ ವಹಿಸಬಹುದಿತ್ತು). ಜನ್ಮಜಾತ ಹಕ್ಕಿನ ಜೊತೆ ಸ್ವತಃ ಪರಾಕ್ರಮಿಯಾದ ಭೀಷ್ಮನಿಗೆ ಇದೇನೂ ಕಷ್ಟವಾಗಿರಲಿಲ್ಲ. ಆದರೆ ಭೀಷ್ಮ ಆಯ್ದುಕೊಂಡದ್ದು ಕೇವಲ ದುರ್ಯೋಧನ ಆಸ್ಥಾನಿಕನಾಗಿ, ರಾಜ ಪಿತಾಮಹನಾಗಿ ಸಿಂಹಾಸನಕ್ಕೆ ನಿಷ್ಠನಾಗಿ ಮುಂದುವರೆಯುವುದಷ್ಟೇ. ಹೋಗಲಿ, ಆ ನಿಷ್ಠೆಯಾದರೂ ನಿಷ್ಕಳಂಕವಾಗಿ ಮುಂದುವರೆಯಿತೇ? ಬಹುಶಃ ಇಲ್ಲವೆಂದೇ ಹೇಳಬೇಕು.


ಕೌರವ ಸೈನ್ಯದ ಆಧಾರಸ್ಥಂಭಗಳಂತಿದ್ದ ಭೀಷ್ಮ ದ್ರೋಣ ಕರ್ಣರು ಒಂದಿಲ್ಲೊಂದು ಗೌಣ ಕಾರಣಗಳಿಂದ ಪಾಂಡವರಿಗೆ ಮೈಯೊಪ್ಪಿಸುತ್ತಾರೆ. ಕರ್ಣನೇನೋ ಕೊನೆಯವರೆಗೂ ನಿರ್ವ್ಯಾಜ ಸ್ವಾಮಿನಿಷ್ಠೆಯನ್ನು ಮೆರೆದರೂ ಕಪಟ-ಕುತಂತ್ರಗಳಿಗೆ ಬಲಿಯಾದ (ತನ್ನದೇ ವಚನಕ್ಕೆ, ದಾನಶೂರತ್ವಕ್ಕೆ ಕಟ್ಟುಬಿದ್ದು); ದ್ರೋಣ, ಮನವೆಲ್ಲಾ ಪಾಂಡವರ ಕಡೆಗಾದರೂ ಯುದ್ಧದ ಜವಾಬ್ದಾರಿಯನ್ನಾದರೂ ಪ್ರಾಮಾಣಿಕವಾಗೇ ನಿರ್ವಹಿಸಿದನೆನ್ನಬೇಕು - ಶಸ್ತ್ರವನ್ನು ತ್ಯಜಿಸುವುದಕ್ಕೆ ಮಗ ಸತ್ತನೆಂಬ ನೆಪ ಸಿಕ್ಕುವವರೆಗೂ! ಆದರೆ ಭೀಷ್ಮನನ್ನು ನೋಡಿ. ಅಜೇಯವೀರ, ಅವನೊಡನೆ ಕಾದಿ ಕಾದಿ ಸೋತು ಸುಣ್ಣವಾಗಿ ಬೇರೆ ದಾರಿ ಕಾಣದೇ ಅವನನ್ನು ಗೆಲ್ಲುವ ಬಗೆ ಹೇಗೆಂದು ಅವನ್ನೇ ಕೇಳುತ್ತಾರೆ ಪಾಂಡವರು! ಅದಕ್ಕೆ ಸ್ವತಃ ಭೀಷ್ಮ (ತಾನು ವಹಿಸಿದ್ದ ಕೌರವ ಪಕ್ಷದ ಹಿತ ಕಾಯ್ದುಕೊಳ್ಳಬೇಕಾದ ಭೀಷ್ಮ) ಅವರಿಗೆ ತನ್ನನ್ನು ಕೊಲ್ಲುವ ಬಗೆಯನ್ನು ಹೇಳಿಕೊಡುತ್ತಾನೆ!


******

ಮೊದಲಾಗಿ, ಕೌರವ ಸಂತಾನವೇ ತಡೆಯಲಾಗದ ಅಸೂಯೆಯ ಫಲ. ತುಂಬು ಗರ್ಭಿಣಿ ಗಾಂಧಾರಿ ಪುತ್ರೋತ್ಸವದ ಪ್ರತೀಕ್ಷೆಯಲ್ಲಿದ್ದಾಗ ತನಗಿಂತಲೂ ಮೊದಲು ಕುಂತಿಗೆ ಮಕ್ಕಳಾಗಿದ್ದನ್ನು ಕೇಳಿ ಉಕ್ಕಿ ಬಂದ ಈರ್ಷ್ಯೆಯನ್ನು ತಡೆಯಲಾಗದೆ ಬಲವಾಗಿ ಬಸಿರನ್ನು ಹೊಸೆದುಕೊಂಡಳಂತೆ. ಹೀಗೆ ಶತ ಛಿದ್ರವಾಗಿ ಹೊರಚೆಲ್ಲಿದ ಪಿಂಡವನ್ನು ವೇದವ್ಯಾಸರು ಔಶಧೀಭರಿತವಾದ ಪಾತ್ರೆಯಲ್ಲಿಟ್ಟು ಪೋಷಿಸಲಾಗಿ ಆ ನೂರೂ ಚೂರುಗಳು (ಅಥವಾ ನೂರೊಂದು, ಮೊದಲೇ ಕಂಡಂತೆ ಕೌರವರ ಸಂಖ್ಯೆ ಮುಖ್ಯವಾಗುವುದೇ ಇಲ್ಲ!) ನೂರು ಪ್ರತ್ಯೇಕ ಶಿಶುಗಳಾಗಿ ಬೆಳೆದುವಂತೆ.

ಮೊದಲಿನಿಂದಲೂ ಧೃತರಾಷ್ಟ್ರನ ಮಕ್ಕಳಿಗೂ ಪಾಂಡುವಿನ ಮಕ್ಕಳಿಗೂ ಮೇಲಾಟ ತಪ್ಪಲಿಲ್ಲ. ಸ್ವಭಾವತಃ ಚುರುಕಾದ ಪಾಂಡುಕುಮಾರರು ಎಲ್ಲದರಲ್ಲೂ ಕೌರವನಿಗೆ ಚಳ್ಳೆಹಣ್ಣು ತಿನ್ನಿಸುವವರೇ; ಕೈತಟ್ಟಿ ಪಕ್ಕೆ ತಿವಿದು ಏಡಿಸಿ ನಗುವರೇ. ಜಿದ್ದು, ಅಸೂಯೆ, ದ್ವೇಷಗಳೇ ನಿತ್ಯಾಹಾರ, ಸುಯೋಧನನಿಗೆ - ಅಜೀರ್ಣವೆನಿಸುವಷ್ಟು; ಪಾಂಡವರಿಗೆ ವಿಷದ ಲಡ್ದುಗೆಯನ್ನು ತಿನ್ನಿಸುವಷ್ಟು; ನೀರಲ್ಲಿ ಮುಳುಗಿಸಿಯೋ ವಿಷಸರ್ಪಗಳಿಂದ ಕಚ್ಚಿಸಿಯೋ ಕೊಲ್ಲುವಷ್ಟು; ಅರಗಿನ ಮನೆಯಲ್ಲಿ ಸುಟ್ಟು ಕಳೆದುಬಿಡುವಷ್ಟು! ಪಾಂಡವರ ಕುಹುಕದ ನಗೆ ಅಲ್ಲಿಗಾದರೂ ನಿಂತಿತೇ? ಮುಂದೆ, ಮಯನಿರ್ಮಿತ ಮಾಯಾ ಭವನದಲ್ಲಿ ಅತಿಥಿಯಾದ ಸುಯೋಧನ ಬಾಗಿಲೆಂದುಕೊಂಡು ಕನ್ನಡಿಗೆ ಢಿಕ್ಕಿ ಹೊಡೆದರೆ; ನೆಲವೆಂದುಕೊಂಡು ನೀರ ಹೊಂಡದೊಳಗೆ ಬಿದ್ದರೆ; ನೀರೆಂದುಕೊಂಡು ಕನ್ನಡಿಯ ನೆಲದ ಮೇಲೆ ಪಂಚೆ ಮೇಲೆತ್ತಿ ನಡೆಯುತ್ತಿದ್ದರೆ; ತನ್ನ ಭಾವನ ಪಾಡನ್ನು ನೋಡಿ ಸಹಾಯಕ್ಕೆ ಸೇವಕರನ್ನು ಕಳುಹಿಸುವ ಬದಲು ಆ ದ್ರೌಪದಿಯಂಥಾ ದ್ರೌಪದಿ ಕೈ ಚಪ್ಪಾಳೆಯಿಕ್ಕಿ ನಕ್ಕಳಲ್ಲಾ! ತನಗೇ ದಕ್ಕಬೇಕಿದ್ದ ದ್ರೌಪದಿ; ತನ್ನೆದುರೇ ತನ್ನ ವೈರಿ ಅರ್ಜುನ ಗೆದ್ದೊಯ್ದ ದ್ರೌಪದಿ; ಐವರು ಗಂಡರಿಗೆ ಹಂಚಿಕೊಂಡ ದ್ರೌಪದಿ - ಇದುವರೆಗೂ ನೆರಳಿನಂತೆ ಸಂಚರಿಸುತ್ತಿದ್ದ ಕೇಡು ಒಮ್ಮೆ ಆಕಳಿಸಿ ಮೈಕೊಡವಿದ್ದು ಅಲ್ಲಿ!

******

ಇಷ್ಟಕ್ಕೂ ಯಾರಿಗೆ ಬೇಕಿತ್ತು ಯುದ್ಧ? ಯಾರಿಗೂ ಇಲ್ಲ, ಅಥವ ಎಲ್ಲರಿಗೂ ಅನ್ನಬಹುದು. ಕಪಟನಾಟಕಸೂತ್ರಧಾರಿ ಕೃಷ್ಣ ಮನಸು ಮಾಡಿದ್ದರೆ ಸಂಧಿಯನ್ನು ಸಮಗೊಳಿಸುವುದು, ಪಾಂಡವರಿಗೆ ನ್ಯಾಯವಾಗಿ ಬರಬೇಕಾದ ರಾಜ್ಯಭಾಗವನ್ನು ದೊರಕಿಸಿ ಕೊಟ್ಟು ಮುಂದಾಗಲಿದ್ದ ಸರ್ವನಾಶವನ್ನು ತಪ್ಪಿಸುವುದು ಕಷ್ಟವೇನೂ ಇರಲಿಲ್ಲ. ಆದರೆ ಸಂಧಿಗೆ ಬರುವಮೊದಲೇ ಅವನು ಕೃಷ್ಣೆಗೆ ವಚನವೀಯುತ್ತಾನೆ, ಯುದ್ದವನ್ನು ಹೊತ್ತಿಸಿಯೇ ಬರುತ್ತೇನೆ ಎಂದು!

ದ್ರೌಪದಿಗೆ ಬೇಕಿತ್ತು ಯುದ್ಧ, ಭೀಮನ ಪ್ರತಿಜ್ಞೆಯಂತೆ ದುಃಶಾಸನನ ರಕ್ತದಿಂದ ತನ್ನ ಬಿಚ್ಚಿದ ಮುಡಿಯನ್ನು ನಾದಿಸಲು!

ಭೀಮನಿಗೆ ಬೇಕಿತ್ತು, ದ್ರೌಪದಿಯನ್ನು ತೊಡೆತಟ್ಟಿ ಕರೆದ ದುರ್ಯೋಧನನ ತೊಡೆ ಮುರಿಯಲು!

ಅರ್ಜುನನಿಗೆ ಬೇಕಿತ್ತು, ತನ್ನ ಪರಮವೈರಿಯಾದ ಕರ್ಣನನ್ನು ಕೊಚ್ಚಿಹಾಕಲು

ದ್ರುಪದನಿಗೆ ಬೇಕಿತ್ತು, ತನ್ನನ್ನೆಳೆತರಿಸಿ ಮಂಚಕ್ಕೆ ಕಟ್ಟಿಸಿದ ದ್ರೋಣನ ಮೇಲೆ ಸೇಡು ತೀರಿಸಿಕೊಳ್ಳಲು

ಶಿಖಂಡಿಗೆ ಬೇಕಿತ್ತು, ಅಂಬೆಯಾಗಿದ್ದ ತನ್ನನ್ನು ನಿರಾಕರಿಸಿ ಬದುಕನ್ನೇ ಹಾಳುಗೆಡವಿದ ಭೀಷ್ಮನನ್ನು ಸಂಹರಿಸಲು

ರಾಜ್ಯಕ್ಕಾಗಿ ಯುದ್ಧ ಎಂಬುದು ಮೇಲ್ನೋಟದ ಘೋಷಣೆಯಷ್ಟೇ. ಪ್ರತಿಯೊಬ್ಬ ವೀರನಿಗೂ ಕಾದಲು ತನ್ನದೇ ಕಾರಣಗಳು, ತೀರಿಸಲು ತನ್ನದೇ ಸೇಡುಗಳು. ಇನ್ನು ಧರ್ಮಕ್ಕಾಗಿ ಯುದ್ಧವೆಂಬ ಮಾತಂತೂ, ವಿಶ್ವನಿಯಾಮಕನ ಲೆಕ್ಕದ ಪುಸ್ತಕದಲ್ಲೆಲ್ಲೋ ಹೇಗೋ ತಾಳೆ ಹೊಂದಿರಬೇಕು; ಧರ್ಮ-ಸೂಕ್ಷ್ಮ! ಹಾಗಿಲ್ಲದಿದ್ದರೆ, ಯುದ್ಧದ ತುಂಬೆಲ್ಲವೂ ತಾಂಡವವಾಡುವುದು ಅಧರ್ಮವೇ? ಅದು ಅಭಿಮನ್ಯುವಿನ ವಧೆಯಿರಬಹುದು, ಕರ್ಣನ ಕೊಲೆಯಿರಬಹುದು, ಧುರ್ಯೋಧನನ ಸಂಹಾರವಿರಬಹುದು; ಸಾಕ್ಷಾತ್ ಧರ್ಮರಾಯ ಹೇಳುತ್ತಾನೆ "ಅಶ್ವತ್ಥಾಮೋ ಹತಃ (ಕುಂಜರಃ)"!

ಇನ್ನು ಕೌರವರ ಕಡೆಗೋ, "ದುಷ್ಟ"ಚತುಷ್ಟಯರೆನಿಸಿದ ದುರ್ಯೋಧನ, ದುಃಶಾಸನ, ಕರ್ಣ, ಶಕುನಿಗಳನ್ನು ಬಿಟ್ಟರೆ ಬೇರಾರಿಗೂ ಯುದ್ಧ ಬೇಕೇಬೇಕೆಂದು ಗಟ್ಟಿಯಾಗಿ ಅನಿಸಿದ್ದೇ ಇಲ್ಲ. ಧೃತರಾಷ್ಟ್ರ ಗಾಂಧಾರಿಯರಿಗೂ ಸಹ, ಯುದ್ಧವಾಗಬೇಕೆಂಬ ಅಭಿಲಾಷೆಗಿಂತ, ಯುದ್ಧವಾದರೆ ತಮ್ಮ ಮಕ್ಕಳು ಗೆಲ್ಲಬೇಕೆಂಬ ಆಶೆಯಷ್ಟೇ ಎದ್ದು ಕಾಣುವುದು. ಹೀಗೆ ಯಾರಿಗೂ ಯುದ್ಧ ಬೇಡದಿದ್ದರೂ ಪ್ರತಿಯೊಬ್ಬನೂ ಯುದ್ಧವನ್ನು ಆಗುಮಾಡಿಸುವೆಡೆಗೇ ದುಡಿಯುತ್ತಾನೆ.

Wednesday, September 17, 2008

ವಿಪತ್ತಿನ ಮುನ್ನುಡಿ

ಕತ್ತಲೆಯಿದ್ದಲ್ಲಿ ತಾನೆ ಬೇಕು ಬೆಳಕು? ಮುಂದಿನ ಇಡೀ ಹದಿನೆಂಟು ಅಧ್ಯಾಯದಲ್ಲಿ ಶ್ರೀ ಕೃಷ್ಣ ಬೆಳಗುವ ಗೀತೆಯ ಬೆಳಕಿಗೆ ವಿಷಾದದ ಮುನ್ನೆಲೆ ಬಹಳ ಔಚಿತ್ಯಪೂರ್ಣವಾಗಿದೆ. ಇದು ನಾವು ಕಾಣುವಂತೆ ಕೇವಲ ಅರ್ಜುನನ ವಿಷಾದವಲ್ಲ, ದುರ್ಯೋಧನನ ವಿಷಾದ, ಭೀಷ್ಮರ ವಿಷಾದ, ಅವತ್ತು ಕುರುಕ್ಷೇತ್ರದಲ್ಲಿ ನೆರೆದಿರುವ ಇಡೀ ಹದಿನೆಂಟು ಅಕ್ಷೋಹಿಣಿ ಸೈನ್ಯದ ವಿಷಾದ ಕೂಡ.

ಇಡೀ ಭಗವದ್ಗೀತೆ ಹೇಳಲ್ಪಡುವುದೇ ಕುರುಡನಾದ ಧೃತರಾಷ್ಟ್ರನಿಗೆ, ಸಂಜಯನಿಂದ. ಅಲ್ಲಿಂದ ಆರಂಭವಾಗುವ ವಿಷಾದ ದುರ್ಯೋಧನನಲ್ಲಿ ಮುಂದುವರೆಯುತ್ತದೆ. ದುರ್ಯೋಧನ ದ್ರೋಣನಿಗೆ ಹೇಳುತ್ತಾನೆ: "ಗುರುಗಳೇ ಪಾಂಡವರ ಕಡೆ ಭೀಮನಿಂದ ರಕ್ಷಿತವಾಗಿರುವ ಸೇನೆಯನ್ನು ನೋಡಿ. ಸಂಖ್ಯಾಬಲದಲ್ಲಿ ನಮಗಿಂತ ಚಿಕ್ಕದಾದರೂ ಅತಿರಥ ಮಹಾರಥರಿಂದ ತುಂಬಿ ಉತ್ಸಾಹಿಯಾಗಿಯೂ ಬಲಶಾಲಿಯಾಗಿಯೂ ಕಾಣುತ್ತಿದೆ. ಆದರೆ ನಮ್ಮ ಕಡೆಯಾದರೋ, ತಾವು, ಭೀಷ್ಮ, ಕರ್ಣನೇ ಮುಂತಾದ, ನನಗೋಸ್ಕರ ಜೀವವನ್ನೇ ತೆರಲು ಸಿದ್ಧರಾದ ಅತಿರಥ ಮಹಾರಥರನ್ನು ಹೊಂದಿದ್ದರೂ ವೃದ್ಧ ಪಿತಾಮಹರಾದ ಭೀಷ್ಮರಿಂದ ಅಭಿರಕ್ಷಿತವಾದ ನಮ್ಮ ಸೇನೆಯು ಉತ್ಸಾಹ-ಬಲಗಳಲ್ಲಿ ಪಾಂಡವ ಸೇನೆಯನ್ನು ಸರಿಗಟ್ಟುವಂತಿಲ್ಲ" ಎನ್ನುತ್ತಾನೆ. ಮುಂದುವರೆದು, ತಾವೆಲ್ಲರೂ ಸುತ್ತುವರೆದು ಪಿತಾಮಹರಾದ ಭೀಷ್ಮರನ್ನೇ ರಕ್ಷಿಸುತ್ತಿರಬೇಕು ಎಂದು ಸೂಕ್ಷ್ಮ ವ್ಯಂಗ್ಯದೊಡಗೂಡಿದ ಆಣತಿಯೀಯುತ್ತಾನೆ. ಸೇನಾಪತಿ ಸೇನೆಯನ್ನು ಮುನ್ನೆಡೆಸಬೇಕು, ಸೇನೆ ಮುನ್ನುಗ್ಗಿ ಯುದ್ಧಮಾಡಬೇಕು - ಸ್ವತಃ ಅಜೇಯ ವೀರನಾದ, ಇಚ್ಛಾಮರಣಿಯಾದ ಭೀಷ್ಮನ ವಿಷಯದಲ್ಲಂತೂ ಇದು ಹೆಚ್ಚು ಪ್ರಸ್ತುತ; ಇಂಥಾ ಮಹಾಸೇನಾಪತಿಯನ್ನು ರಕ್ಷಿಸಿಕೊಳ್ಳಿ ಎಂದು ಸೇನೆಗೆ ನಿಯೋಜಿಸುತ್ತಾನೆ ದುರ್ಯೋಧನ. ಒಬ್ಬ ನಾಯಕನಿಂದ ಹೊಮ್ಮುವ ಈ ಮಾತುಗಳು ಸೇನೆಯ ಮೇಲೆ ಸೇನಾಪತಿಯ ಮೇಲೆ ಉಂಟುಮಾಡುವ de-moralising ಪರಿಣಾಮವನ್ನು ನೋಡಿ.
.
ಧರ್ಮದ ಬಲವಿಲ್ಲ, ಧರ್ಮಪಕ್ಷಪಾತಿಗಳಾಗಿ ಕೇವಲ ಕರ್ಮಮಾತ್ರದಿಂದ ಕೌರವಪಕ್ಷದಲ್ಲಿರುವ ಗುರು-ಹಿರಿಯರ ಬಲ ಮೊದಲೇ ಇಲ್ಲ, ಕೇವಲ ಕರುಬಿನಿಂದ ಒಳಗೇ ತಿಂದುಹೋಗಿರುವ ಕೌರವನಿಗೆ ಆತ್ಮದ ಬಲವೂ ಇಲ್ಲ, ಇರುವ ಬಲದಲ್ಲಿ ನಂಬಿಕೆಯೂ ಇಲ್ಲ. ಅವನ ಒಳಹೊರಗೆ ಕೇವಲ "ಇಲ್ಲ"ದ್ದೇ ರಾಜ್ಯಭಾರ. ಪಾಂಡವರಿಗಾದರೋ ಯುದ್ಧದಿಂದ ಕಳೆದುಕೊಳ್ಳುವುದೇನೂ ಇಲ್ಲ, ಜೀವವೊಂದನ್ನು ಬಿಟ್ಟು. ಆದರೆ ದುರ್ಯೋಧನನಿಗೆ ಕಳೆದುಕೊಳ್ಳಲು ಸರ್ವಸ್ವವೂ ಇದೆ. ಆದ್ದರಿಂದ ಅವರಿಗಿದು ಗೆಲ್ಲಲು ಹೋರಾಟವಾದರೆ, ಇವರಿಗೆ ಸೋಲದಿರಲು ಹೋರಾಟ! ಆದ್ದರಿಂದಲೇ ಪಾಂಡವರಿಗೊಂದು ಗುರಿಯಿದೆ, ಕೌರವನಿಗೆ ಅದಿಲ್ಲ. ಆದ್ದರಿಂದ, ಕೌರವನ ಆಟ ಕೇವಲ defensive ಆಗಿಯೇ ಉಳಿಯುತ್ತದೆ.
.
ಮತ್ತೊಂದನ್ನು ಗಮನಿಸಬೇಕೆಂದರೆ, ಇಡೀ ಭಾರತದಲ್ಲಿ ಪಾಂಡವರು ಐದೂ ಜನ ಒಗ್ಗಟ್ಟಾಗಿ ಪಾಂಡವರೆಂಬ ಬಹುವಚನದಿಂದ ವಿಜೃಂಬಿಸುತ್ತಾರೆ. ಒಬ್ಬ ಹೆಂಡತಿಯನ್ನೂ ಹಂಚಿಕೊಂಡು ಬಾಳುವಷ್ಟು ಅತಿರೇಕದ ಒಗ್ಗಟ್ಟು ಅದು! ಆದರೆ ಕೌರವರ ವಿಷಯಕ್ಕೆ ಬಂದರೆ ಕೌರವರೆಂಬ ಬಹುವಚನದಲ್ಲೂ ಎದ್ದು ಕಾಣುವನು ದುರ್ಯೋಧನನೊಬ್ಬನೇ! ಆಗೀಗ ದುಃಶ್ಶಾಸನ ತನ್ನ ಅಸೀಮ ದುಷ್ಟತನ ದುರಾಚಾರಗಳಿಂದ ಗಮನ ಸೆಳೆಯುತ್ತಾನಾದರೂ ಆ ದುಷ್ಟತನ ಕೂಡ ಕೌರವ ಸಮಷ್ಟಿಯ ಛಾಪನ್ನು ಹೊತ್ತು ನಿಲ್ಲುವುದೇ ಇಲ್ಲ. ಇನ್ನು ಇತರ ಕೌರವರೋ, ನಾಮಮಾತ್ರವಾಗಿ ವ್ಯಾಸಭಾರತದಲ್ಲೆಲ್ಲೋ ಬರುತ್ತಾರಷ್ಟೇ ಹೊರತು ಅವರ ಪಾತ್ರಗಳ ಔಚಿತ್ಯವೇ ತಿಳಿಯುವುದಿಲ್ಲ (ಸಂಖ್ಯಾಬಾಹುಳ್ಯದ ಔಚಿತ್ಯವೊಂದನ್ನು ಹೊರತು). ಅದರಿಂದಲೇ ಪಾಂಡವರು ಒಂದು ಸಮಷ್ಟಿಯಾಗಿ ನಿಂತರೆ, ಕೌರವ ಕೇವಲ ಕೌರವನಾಗಿಯೇ ಉಳಿಯುತ್ತಾನೆ, "ಕೌರವರು" ಎಂಬ ಪದ ಕೇವಲ ಔಪಚಾರಿಕವಾಗಿ ಉಳಿಯುತ್ತದೆ.
.
ಹೀಗೆ ಮೂಲಭೂತವಾಗಿ ಏಕಾಂಗಿಯೇ ಆಗಿ, ತನ್ಮೂಲಕ ದುರ್ಬಲನಾಗಿ ನಿಲ್ಲುವ ದುರ್ಯೋಧನನಿಗೆ, ತನ್ನ ಹನ್ನೊಂದು ಅಕ್ಷೋಹಿಣಿಯ ಬೃಹತ್ ಸೇನೆ ಕೂಡ ಪಾಂಡವ ಸಮಷ್ಠಿ ಬಲದ ಏಳು ಅಕ್ಷೋಹಿಣಿಯ ಮುಂದೆ ತೀರ ದುರ್ಬಲವಾಗಿ ಕಂಡದ್ದು ಸಹಜವೇ.
.
ಹೀಗೆ ವಿಷಣ್ಣ ಮಾನಸನಾಗಿ ನಿರುತ್ಸಾಹವನ್ನು ಬೀರುತ್ತಾ ನಿಂತ ದುರ್ಯೋಧನನಿಗೆ ಉತ್ಸಾಹ ಮೂಡಿಸಲು ರಣ ಶಂಖವನ್ನೂದುತ್ತಾರೆ, ಭೀಷ್ಮರು. ಆದರೇನು, ಒಳಗಿಲ್ಲದ ಉತ್ಸಾಹವನ್ನು ಹೊರಗಿನಿಂದ ತುಂಬಲಾದೀತೇ? ಏರಿ ಬರುತ್ತಿರುವ ಕಾವಳವನ್ನು ತೊಡೆಯಲೆತ್ನಿಸುವ ಮಿಣುಕು ಹಣತೆಯ ಪ್ರಯತ್ನದಂತೆ ನಿಷ್ಫಲಗೊಳ್ಳುತ್ತದೆ, ಭೀಷ್ಮರ ಈ ಪ್ರಯತ್ನ. ಅಷ್ಟೇ ಅಲ್ಲ, ಈ ಶಂಖನಾದಕ್ಕೆ ಉತ್ತರ, ಶ್ರೀ ಕೃಷ್ಣನ ಪಾಂಚಜನ್ಯ. ಅದಕ್ಕನುಗುಣವಾಗಿ ಅರ್ಜುನನು ದೇವದತ್ತವೆಂಬ ಶಂಖವನ್ನೂದಿದರೆ, ಭೀಮನು ಪೌಂಡ್ರಕವೆಂಬ ಮಹಾಶಂಖವನ್ನೂ, ನಕುಲ-ಸಹದೇವರು ಸುಘೋಷ-ಮಣಿಪುಷ್ಪಕಗಳನ್ನೂ, ಯುಧಿಷ್ಟಿರನು ಅನಂತವಿಜಯವನ್ನೂ, ಶಿಖಂಡಿ, ದೃಷ್ಟದ್ಯುಮ್ನ, ವಿರಾಟ ಸಾತ್ಯಕಿಯೇ ಮೊದಲಾದ ಪಾಂಡವ ವೀರರು ತಂತಮ್ಮ ಶಂಖಗಳನ್ನು ಮೇಲಿಂದ ಮೇಲೆ ಊದುತ್ತಾರೆ. ಈ ಎಲ್ಲದರಿಂದ ಉತ್ಪನ್ನವಾದ ಮಹಾಘೋಷ ಭೂಮ್ಯಾಕಾಶಗಳನ್ನು ತುಂಬಿ ಕೌರವರ ಎದೆಯನ್ನು ಒಡೆಯುವಂತೆ ಭೋರ್ಗರೆಯುತ್ತದೆ.
.
ಆ ವ್ಯತ್ಯಾಸ ನೋಡಿ. ಭೀಷ್ಮರು ಶಂಖವನ್ನೂದುತ್ತಾರೆ, ಸೇನೆಯನ್ನು ಹುರಿದುಂಬಿಸಲು ಅಲ್ಲ, ಶತ್ರುವನ್ನು ಎದೆಗೆಡಿಸುವ ಯುದ್ಧತಂತ್ರಕ್ಕಾಗಿಯಲ್ಲ, ಕೇವಲ ದುರ್ಯೋಧನನನ್ನು ಉತ್ಸಾಹಗೊಳಿಸಲು, ಅದಕ್ಕಿಂತ ಹೆಚ್ಚಾಗಿ, ಈಗತಾನೆ ತಾನು ಕೈಲಾಗದ ಮುದುಕನೆಂದು ಚುಚ್ಚಿದನಲ್ಲ, ಅದು ಹಾಗಲ್ಲ ಎಂದು ಅವನಿಗೆ ಹೇಳಲು. ಮತ್ತೆ, defensive ನಡೆ! ಇದಕ್ಕೆ ಪಾಂಡವರ ಉತ್ತರವಾದರೋ, ಆತ್ಮವಿಶ್ವಾಸವೇ ಮೂರ್ತಿವೆತ್ತಂತೆ ತುಂಬುಗೊರಲಿನ ನಾದ, ಪಾಂಚಜನ್ಯವೇ ಮೊದಲಾದ ಮಹಾಶಂಖಗಳ ನಾದ, ತೊಡೆತಟ್ಟಿ ಕದನಕ್ಕೆ ಆಹ್ವಾನಿಸುವ ರಣೋನ್ಮಾದ! ಮೊದಲೇ ಜರಿದು ಬಿದ್ದ ಕೌರವನ ಎದೆಯೊಡೆಯಲು ಬೇರೇನು ಬೇಕು?
.
ಒಟ್ಟಾರೆ, ಕೌರವರ(ನ) ಹುಟ್ಟಿನಿಂದ ಹಿಡಿದು ಇಂದಿನವರೆಗೆ, ಕೌರವ-ಪಾಂಡವರ ಬದುಕು ರೂಪಿಸುತ್ತಾ, ಕೌರವ ಪಾಂಡವರನ್ನೂ ಒಳಗೊಂಡಂತೆ ಹದಿನೆಂಟು ಅಕ್ಷೋಹಿಣಿಯ ಮಹಾಸೇನೆಯನ್ನು ಇಂದು ಈ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಿಯೋಜಿಸಲು ಕಾರಣವಾದ ಘಟನೆಗಳೆಲ್ಲದರ ಪಡಿನೆಳಲು ಇವತ್ತು ಇಡೀ ಯುದ್ಧಭೂಮಿಯನ್ನು ಆವರಿಸಿದೆ, ಮುಂದಿನ ಮಹಾವಿಪತ್ತಿನ ವಿಷಾದಪೂರ್ಣವಾದ ಮುನ್ನುಡಿಯೆಂಬಂತೆ.

ಗೀತಾಮಂದಿರದ ಹೊಂಬಾಗಿಲಲ್ಲಿ ನಿಂತು...

ಗೀತೆಯ ಬಗ್ಗೆ ನಾನೇಕೆ ಬರೆಯುತ್ತಿದ್ದೇನೆನ್ನುವ ಬಗ್ಗೆ ನಾನು ಹೇಳದಿದ್ದರೆ ಉತ್ತರ ಬಹು ಸುಲಭ. ಗೀತೆ, ಜೀವನೋಪಯೋಗೀ ವಿಚಾರಗಳ ಗಣಿ; ಅನೇಕ ಗೂಢಾರ್ಥ-ಕೂಟಾರ್ಥಗಳನ್ನುಳ್ಳದ್ದು (ಕಬ್ಬಿಣದ ಕಡಲೆ!); ಬದುಕಿನ ಅನೇಕ ಗೊಂದಲಗಳಿಗೆ ಉತ್ತರ ಇಲ್ಲಿದೆ. ಮತ್ತೇನಿಲ್ಲದಿದ್ದರೂ ಗೀತೆಯ ಓದು-ಚರ್ಚೆ ನಾಲ್ಕು ಜನರ ಮಧ್ಯೆ ಒಂದು "ಸ್ಥಾನ-ಮಾನ" ತಂದುಕೊಡುತ್ತದೆ. ಅಷ್ಟೇಕೆ, ಭಗವದ್ಗೀತೆಯಿಂದ ಒಂದು ಸಾಲನ್ನೋ ಚರಣವನ್ನೋ ತೆಗೆದು ಕೇಳುಗರ ಮೇಲೆ ಬಿಡುವುದು ಬಹುತೇಕ ಭಾಷಣಕಾರರ ಹವ್ಯಾಸವೇ ಆಗಿದೆ. ಆದರೆ ಈ ತೆರನ ಯಾವ "ಉಪಯೋಗ"ಗಳಿಗಾಗಿಯೂ ಗೀತೆಯಬಗ್ಗೆ ಬರೆಯುವ ಇರಾದೆ ನನಗಿಲ್ಲ.
.
ತಾನು ಭಾರತದ ಬದಲಿಗೆ ರಾಮಾಯಣವನ್ನೇಕೆ ಬರೆಯಲಿಲ್ಲವೆಂಬುದಕ್ಕೆ ಕುಮಾರವ್ಯಾಸ ಕಾರಣವನ್ನು ಕೊಡುತ್ತಾನೆ "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ." ರಘುವರನ ಚರಿತೆಯಲ್ಲಿ ಕಾಲಿಡಲೂ ತೆರಪಿರಲಿಲ್ಲವಂತೆ! ಅದಕ್ಕೇ ಕವಿ ಭಾರತದ ಪುಣ್ಯಪ್ರಸಂಗವನ್ನೆತ್ತಿಕೊಂಡಿದ್ದು. ಆದರೆ ಈ "ಅತಿ ಭಾರ"ದ ಸಮಸ್ಯೆ ಭಾರತದ ಕವಿಗಳ ಭಾರಕ್ಕೆ ಮಾತ್ರ ಹೇಗೆ ಅನ್ವಯಿಸಲಿಲ್ಲವೋ ನನಗೆ ತಿಳಿಯದು. ತತ್ರಾಪಿ ಭಗವದ್ಗೀತೆಯ ವಿಷಯದಲ್ಲಂತೂ ಇದು ಸತ್ಯಸ್ಯ ಸತ್ಯ ಎಂದೇ ನನ್ನ ಅನಿಸಿಕೆ. ಆಚಾರ್ಯತ್ರಯರಾದ ಶಂಕರ, ರಾಮಾನುಜ, ಮಧ್ವರನ್ನೊಳಗೊಂಡು ಇಂದಿನ ತಿಲಕ್, ಗಾಂಧಿ, ನಮ್ಮ ಡಿ.ವಿ.ಜಿಯವರ ವರೆಗೂ ಅನೇಕಾನೇಕ ಜನ ಮಹಾ ಮಹಾ ಪಂಡಿತರು, ಮೇಧಾವಿಗಳು, ದಾರ್ಶನಿಕರು ಇದರ ಬಗ್ಗೆ ಹಲವೆಂಟು ತಾತ್ಪರ್ಯ, ವ್ಯಾಖ್ಯಾನ, ಟೀಕೆ-ಟಿಪ್ಪಣಿಗಳನ್ನು ರಚಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ, ಮಹದ್ಗ್ರಂಥಗಳನ್ನು ರಚಿಸಿದ್ದಾರೆ. ಅದ್ದರಿಂದ ಫಣಿರಾಯನ ತಿಣುಕಾಟಕ್ಕೆ ಮತ್ತೊಂದು ಹೊರೆಯನ್ನು ಹೇರುವ ಇರಾದೆ ನನಗಂತೂ ಇಲ್ಲ.
.
ತಮಾಷೆ ಒತ್ತಟ್ಟಿಗಿರಲಿ, ಗೀತಾರಹಸ್ಯದಂಥ ಗ್ರಂಥವೊಂದನ್ನು ಬರೆಯಲು ಬೇಕಾದ ಜ್ಞಾನ ಸಂಪತ್ತಾಗಲೀ ಬುದ್ಧಿ ಸಂಪತ್ತಾಗಲಿ, ಅಥವ ಅದನ್ನು ಬರೆಯಲೋಸುಗವೇ ಅವುಗಳನ್ನು ಗಳಿಸಿಕೊಳ್ಳುವ ಅಗತ್ಯವಾಗಲೀ ಅನುಕೂಲವಾಗಲೀ ನನ್ನಲ್ಲಿಲ್ಲ (ಆಸೆಯೇನೋ ಖಂಡಿತಾ ಇದೆ - ದುಃಖಕ್ಕೆ ಮೂಲಕಾರಣವಾಗಿ).
.
ಹಾಗಿದ್ದರೆ, ಗೀತೆಯ ಬಗ್ಗೆ ನಾನೇಕೆ ಬರೆಯುತ್ತಿದ್ದೇನೆ? ಅದು ನಾನು ಗೀತೆಯನ್ನು ಓದುವ, ಅರಗಿಸಿಕೊಳ್ಳುವ, ಓದಿನ ದಾರಿಯಲ್ಲಿ ನಾ ಕಂಡ ಆದರ ತಲೆದೂಗಿಸುವ ತರ್ಕ, ಸನ್ನಿವೇಶ ಚಿತ್ರಣ, ಒಳದನಿಗಳೇ ಮುಂತಾದ ಸ್ವಾರಸ್ಯಗಳನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವ ರೀತಿಯಷ್ಟೇ.
.
ಇದು ಗೀತೆಯ ಸಪ್ರಮಾಣ ಅನುವಾದವಲ್ಲ (ಮೊದಲಾಗಿ ಅನುವಾದವೇ ಅಲ್ಲ); ಗೀತೆಯ ವಿಶ್ಲೇಷಣೆಯೋ, ವಿಮರ್ಶೆಯೋ ಅಲ್ಲ. ಧಾರ್ಮಿಕ/ಬೌದ್ಧಿಕ/ಐತಿಹಾಸಿಕ/ಆಧ್ಯಾತ್ಮಿಕವಾದದ್ದೇನೂ ಇಲ್ಲಿ ಮುಖ್ಯವಾಗಿ ಬರುವುದಿಲ್ಲ. ಶಾಸ್ತ್ರವಿಚಾರದಲ್ಲಿ ಏನಾದರೂ ಅಂತರ್ದೃಷ್ಟಿ ಕೊಡುವ ಪ್ರಯತ್ನವೂ ಇದಲ್ಲ. ಹೆಚ್ಚೆಂದರೆ ಗೀತೆಯನ್ನು ಒಮ್ಮೆ ಆಳವಾಗಿ, "ಸರಿಯಾಗಿ" ಅಭ್ಯಸಿಸುವ ಹಟ ಮೂಡಿಸಬಹುದು, ನನ್ನಂತೆಯೇ ಇನ್ನೊಬ್ಬ ಪಾಮರ ಓದುಗನಲ್ಲಿ.
.
ಮೊದಲೇ ಹೇಳಿದಂತೆ, ಭಗವದ್ಗೀತೆಯನ್ನು ಓದುತ್ತಾ ಚಿಂತಿಸುತ್ತಾ ಹೋದಂತೆ ನನ್ನಲ್ಲಿ ಮೂಡುತ್ತಾ ಹೋಗುವ ವಿಚಾರಗಳನ್ನು ದಾಖಲಿಸುವುದಷ್ಟೇ ಸಧ್ಯದ ಉದ್ದೇಶ. ಇದು ಕೇವಲ ನನ್ನದೇ ವಿಚಾರವಾದ್ದರಿಂದ, ಇದಕ್ಕೆ ಯಾವುದೇ ಪ್ರಮಾಣವನ್ನು ನಿರೀಕ್ಷಿಸುವಂತಿಲ್ಲ. ಅಲ್ಲದೇ ಇದು ವಿಚಾರ ಲಹರಿಯಾದ್ದರಿಂದ, ವಿಚಾರಗಳ ಕ್ರಮ ಹಿಂದು-ಮುಂದಾಗಬಹುದು, ಗತಿ ಏರುಪೇರಾಗಬಹುದು, ಬಹಳಷ್ಟು ಕಡೆ ಗೀತೆಗೆ ಸಂಬಂಧಿಸಿಯೇ ಇರದ ವಿಷಯ, ಪಾತ್ರ, ಕರ್ತೃ ನುಸುಳಿ ಬರಬಹುದು. ಆದರೆ ಇವೆಲ್ಲದರ ಅಂತರ್ಗತವಾಗಿ ಗೀತೆಯ ಮೂಲ ಶ್ರುತಿ ಮಿಡಿಯುತ್ತಿರುತ್ತದೆ ಎಂದಷ್ಟು ಹೇಳಬಲ್ಲೆ.
.
ಶುಭಂ