ಶೀರ್ಷಿಕೆಗಳು

Wednesday, September 17, 2008

ಗೀತಾಮಂದಿರದ ಹೊಂಬಾಗಿಲಲ್ಲಿ ನಿಂತು...

ಗೀತೆಯ ಬಗ್ಗೆ ನಾನೇಕೆ ಬರೆಯುತ್ತಿದ್ದೇನೆನ್ನುವ ಬಗ್ಗೆ ನಾನು ಹೇಳದಿದ್ದರೆ ಉತ್ತರ ಬಹು ಸುಲಭ. ಗೀತೆ, ಜೀವನೋಪಯೋಗೀ ವಿಚಾರಗಳ ಗಣಿ; ಅನೇಕ ಗೂಢಾರ್ಥ-ಕೂಟಾರ್ಥಗಳನ್ನುಳ್ಳದ್ದು (ಕಬ್ಬಿಣದ ಕಡಲೆ!); ಬದುಕಿನ ಅನೇಕ ಗೊಂದಲಗಳಿಗೆ ಉತ್ತರ ಇಲ್ಲಿದೆ. ಮತ್ತೇನಿಲ್ಲದಿದ್ದರೂ ಗೀತೆಯ ಓದು-ಚರ್ಚೆ ನಾಲ್ಕು ಜನರ ಮಧ್ಯೆ ಒಂದು "ಸ್ಥಾನ-ಮಾನ" ತಂದುಕೊಡುತ್ತದೆ. ಅಷ್ಟೇಕೆ, ಭಗವದ್ಗೀತೆಯಿಂದ ಒಂದು ಸಾಲನ್ನೋ ಚರಣವನ್ನೋ ತೆಗೆದು ಕೇಳುಗರ ಮೇಲೆ ಬಿಡುವುದು ಬಹುತೇಕ ಭಾಷಣಕಾರರ ಹವ್ಯಾಸವೇ ಆಗಿದೆ. ಆದರೆ ಈ ತೆರನ ಯಾವ "ಉಪಯೋಗ"ಗಳಿಗಾಗಿಯೂ ಗೀತೆಯಬಗ್ಗೆ ಬರೆಯುವ ಇರಾದೆ ನನಗಿಲ್ಲ.
.
ತಾನು ಭಾರತದ ಬದಲಿಗೆ ರಾಮಾಯಣವನ್ನೇಕೆ ಬರೆಯಲಿಲ್ಲವೆಂಬುದಕ್ಕೆ ಕುಮಾರವ್ಯಾಸ ಕಾರಣವನ್ನು ಕೊಡುತ್ತಾನೆ "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ." ರಘುವರನ ಚರಿತೆಯಲ್ಲಿ ಕಾಲಿಡಲೂ ತೆರಪಿರಲಿಲ್ಲವಂತೆ! ಅದಕ್ಕೇ ಕವಿ ಭಾರತದ ಪುಣ್ಯಪ್ರಸಂಗವನ್ನೆತ್ತಿಕೊಂಡಿದ್ದು. ಆದರೆ ಈ "ಅತಿ ಭಾರ"ದ ಸಮಸ್ಯೆ ಭಾರತದ ಕವಿಗಳ ಭಾರಕ್ಕೆ ಮಾತ್ರ ಹೇಗೆ ಅನ್ವಯಿಸಲಿಲ್ಲವೋ ನನಗೆ ತಿಳಿಯದು. ತತ್ರಾಪಿ ಭಗವದ್ಗೀತೆಯ ವಿಷಯದಲ್ಲಂತೂ ಇದು ಸತ್ಯಸ್ಯ ಸತ್ಯ ಎಂದೇ ನನ್ನ ಅನಿಸಿಕೆ. ಆಚಾರ್ಯತ್ರಯರಾದ ಶಂಕರ, ರಾಮಾನುಜ, ಮಧ್ವರನ್ನೊಳಗೊಂಡು ಇಂದಿನ ತಿಲಕ್, ಗಾಂಧಿ, ನಮ್ಮ ಡಿ.ವಿ.ಜಿಯವರ ವರೆಗೂ ಅನೇಕಾನೇಕ ಜನ ಮಹಾ ಮಹಾ ಪಂಡಿತರು, ಮೇಧಾವಿಗಳು, ದಾರ್ಶನಿಕರು ಇದರ ಬಗ್ಗೆ ಹಲವೆಂಟು ತಾತ್ಪರ್ಯ, ವ್ಯಾಖ್ಯಾನ, ಟೀಕೆ-ಟಿಪ್ಪಣಿಗಳನ್ನು ರಚಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ, ಮಹದ್ಗ್ರಂಥಗಳನ್ನು ರಚಿಸಿದ್ದಾರೆ. ಅದ್ದರಿಂದ ಫಣಿರಾಯನ ತಿಣುಕಾಟಕ್ಕೆ ಮತ್ತೊಂದು ಹೊರೆಯನ್ನು ಹೇರುವ ಇರಾದೆ ನನಗಂತೂ ಇಲ್ಲ.
.
ತಮಾಷೆ ಒತ್ತಟ್ಟಿಗಿರಲಿ, ಗೀತಾರಹಸ್ಯದಂಥ ಗ್ರಂಥವೊಂದನ್ನು ಬರೆಯಲು ಬೇಕಾದ ಜ್ಞಾನ ಸಂಪತ್ತಾಗಲೀ ಬುದ್ಧಿ ಸಂಪತ್ತಾಗಲಿ, ಅಥವ ಅದನ್ನು ಬರೆಯಲೋಸುಗವೇ ಅವುಗಳನ್ನು ಗಳಿಸಿಕೊಳ್ಳುವ ಅಗತ್ಯವಾಗಲೀ ಅನುಕೂಲವಾಗಲೀ ನನ್ನಲ್ಲಿಲ್ಲ (ಆಸೆಯೇನೋ ಖಂಡಿತಾ ಇದೆ - ದುಃಖಕ್ಕೆ ಮೂಲಕಾರಣವಾಗಿ).
.
ಹಾಗಿದ್ದರೆ, ಗೀತೆಯ ಬಗ್ಗೆ ನಾನೇಕೆ ಬರೆಯುತ್ತಿದ್ದೇನೆ? ಅದು ನಾನು ಗೀತೆಯನ್ನು ಓದುವ, ಅರಗಿಸಿಕೊಳ್ಳುವ, ಓದಿನ ದಾರಿಯಲ್ಲಿ ನಾ ಕಂಡ ಆದರ ತಲೆದೂಗಿಸುವ ತರ್ಕ, ಸನ್ನಿವೇಶ ಚಿತ್ರಣ, ಒಳದನಿಗಳೇ ಮುಂತಾದ ಸ್ವಾರಸ್ಯಗಳನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವ ರೀತಿಯಷ್ಟೇ.
.
ಇದು ಗೀತೆಯ ಸಪ್ರಮಾಣ ಅನುವಾದವಲ್ಲ (ಮೊದಲಾಗಿ ಅನುವಾದವೇ ಅಲ್ಲ); ಗೀತೆಯ ವಿಶ್ಲೇಷಣೆಯೋ, ವಿಮರ್ಶೆಯೋ ಅಲ್ಲ. ಧಾರ್ಮಿಕ/ಬೌದ್ಧಿಕ/ಐತಿಹಾಸಿಕ/ಆಧ್ಯಾತ್ಮಿಕವಾದದ್ದೇನೂ ಇಲ್ಲಿ ಮುಖ್ಯವಾಗಿ ಬರುವುದಿಲ್ಲ. ಶಾಸ್ತ್ರವಿಚಾರದಲ್ಲಿ ಏನಾದರೂ ಅಂತರ್ದೃಷ್ಟಿ ಕೊಡುವ ಪ್ರಯತ್ನವೂ ಇದಲ್ಲ. ಹೆಚ್ಚೆಂದರೆ ಗೀತೆಯನ್ನು ಒಮ್ಮೆ ಆಳವಾಗಿ, "ಸರಿಯಾಗಿ" ಅಭ್ಯಸಿಸುವ ಹಟ ಮೂಡಿಸಬಹುದು, ನನ್ನಂತೆಯೇ ಇನ್ನೊಬ್ಬ ಪಾಮರ ಓದುಗನಲ್ಲಿ.
.
ಮೊದಲೇ ಹೇಳಿದಂತೆ, ಭಗವದ್ಗೀತೆಯನ್ನು ಓದುತ್ತಾ ಚಿಂತಿಸುತ್ತಾ ಹೋದಂತೆ ನನ್ನಲ್ಲಿ ಮೂಡುತ್ತಾ ಹೋಗುವ ವಿಚಾರಗಳನ್ನು ದಾಖಲಿಸುವುದಷ್ಟೇ ಸಧ್ಯದ ಉದ್ದೇಶ. ಇದು ಕೇವಲ ನನ್ನದೇ ವಿಚಾರವಾದ್ದರಿಂದ, ಇದಕ್ಕೆ ಯಾವುದೇ ಪ್ರಮಾಣವನ್ನು ನಿರೀಕ್ಷಿಸುವಂತಿಲ್ಲ. ಅಲ್ಲದೇ ಇದು ವಿಚಾರ ಲಹರಿಯಾದ್ದರಿಂದ, ವಿಚಾರಗಳ ಕ್ರಮ ಹಿಂದು-ಮುಂದಾಗಬಹುದು, ಗತಿ ಏರುಪೇರಾಗಬಹುದು, ಬಹಳಷ್ಟು ಕಡೆ ಗೀತೆಗೆ ಸಂಬಂಧಿಸಿಯೇ ಇರದ ವಿಷಯ, ಪಾತ್ರ, ಕರ್ತೃ ನುಸುಳಿ ಬರಬಹುದು. ಆದರೆ ಇವೆಲ್ಲದರ ಅಂತರ್ಗತವಾಗಿ ಗೀತೆಯ ಮೂಲ ಶ್ರುತಿ ಮಿಡಿಯುತ್ತಿರುತ್ತದೆ ಎಂದಷ್ಟು ಹೇಳಬಲ್ಲೆ.
.
ಶುಭಂ

5 comments:

ಜಯಂತ ಬಾಬು said...

ಒಂದು ಒಳ್ಳೆಯ ಓದು, ಹಲವು ಪ್ರಶ್ನೆಗಳಿಗೆ ಉತ್ತರ ...ಹೀಗೆ ನಿರೀಕ್ಷೆ ಇದೆ ..ತುಂಬಾ ಒಳ್ಳೆಯ ಪ್ರಯತ್ನ ಸಾರ್‍ ..

Srikanth said...

* PTK ಪಂಚ್ ನಿಂದ ಕೂಡಿದೆ. ಉದ್ದೇಶವನ್ನು ಸ್ಪಶ್ಟವಾಗಿ ವಿವರಿಸಿದ್ದೀರ. ಓದುಗನಿಗೆ expectation set ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ!

* -- [ಅಗತ್ಯವಾಗಲೀ ಅನುಕೂಲವಾಗಲೀ ನನ್ನಲ್ಲಿಲ್ಲ (ಆಸೆಯೇನೋ ಖಂಡಿತಾ ಇದೆ - ದುಃಖಕ್ಕೆ ಮೂಲಕಾರಣವಾಗಿ).] ಇದು typical ಮಂಜುನಾಥ್ style :)

* ಲಹರಿ ಹೀಗೆ ಹರಿದು ಬರಲಿ.ಮುಂದಿನ ಕಂತುಗಳಿಗೆ ಕಾದು ಕುಳಿತಿದ್ದೇವೆ.

Truth Eternal said...

can we have eng translation of the same?///
U can also visit my blog www.thetrutheternal.blogspot.com
& pls post comment for improvement
thanx

Anonymous said...

samaanyavagi mahabharatha jnaana sagara saamaanya janarige tiliyuvanthe olleya kaaryakrama hakikodiddiri. munduvarisi. e hinde T.V.yalli mahabharath episode prasaarvaguttiddaga makkalinda hididu vayovruddaru saha hidi arthavagadiddaru noduttiddaru adu kannadakke dub Agiddare anukulavagutittu. idu namma duradrusta. ade nerehore raajydavru avravara bhasheyalli nodi Anandisidare navu jollu surisutta kulitirabeku.

Manjunatha Kollegala said...

ಅನಾಮಿಕರೇ, ಡಬ್ಬಿಂಗಿನ ರಾಜಕೀಯಕ್ಕೂ ಗೀತಾವಿಚಾರಕ್ಕೂ ಸಂಬಂಧವಿಲ್ಲ, ಹಾಗೆಯೇ ಟಿ.ವಿ.ಯ ಮಹಾಭಾರತಕ್ಕೂ ಮೂಲಮಹಾಭಾರತಕ್ಕೂ!

ಡಬ್ಬಿಂಗಿನ ಸಂಸ್ಕೃತಿಯಬಗ್ಗೆಯೇ ನನಗೆ ನನ್ನದೇ ಆದ ಧೋರಣೆಗಳಿವೆ, ಅದನ್ನು ನಾವು ಪ್ರತ್ಯೇಕವಾಗಿ ಚರ್ಚಿಸಬಹುದು.

ತಮಗೆ ಈ ಪ್ರಯತ್ನ ಸಂತೋಷ ತಂದಿದ್ದರೆ ಬಹಳ ಸಂತೋಷ. ಬರುತ್ತಿರಿ.