ಅದಿರಲಿ, ಮುಂದೆ ಧೃತರಾಷ್ಟ್ರನ ಅಂಧಾಡಳಿತದಲ್ಲಿ ಕೌರವ ರಾಜಕುವರರ ಸ್ವೇಚ್ಛಾಚಾರ ಮಿತಿಮೀರಿದಾಗ ಭೀಷ್ಮನೇ ಮೊದಲಾಗಿ, ದ್ರೋಣ, ವಿದುರ ಮುಂತಾದ ಹಿರಿಯರೆಲ್ಲರೂ ತಮ್ಮ ಶಕ್ತಿಮೀರಿ ದುರ್ಯೋಧನನಿಗೆ ಬುದ್ಧಿ ಹೇಳುತ್ತಾರೆ; ಇತರ ಹಿರಿಯರ ಮಿತಿ ಅಷ್ಟೇ ಇರಬಹುದು, ಆದರೆ ಭೀಷ್ಮ (ಯಾರ 'ತ್ಯಾಗ' ವಿಚಿತ್ರವೀರ್ಯನ ನಿಯೋಗೀ ಸಂತತಿಯನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿತ್ತೋ ಆ ಭೀಷ್ಮ) ಖಂಡಿತ ಬುದ್ಧಿ ಹೇಳುವುದಕ್ಕಿಂತಾ ಒಂದು ಹೆಜ್ಜೆ ಮುಂದೆ ಹೋಗಲು ಸಾಧ್ಯವಿತ್ತು; ಅಧರ್ಮಿಗಳಾದ ಧೃತರಾಷ್ಟ್ರ ಪುತ್ರರನ್ನು ಕಿತ್ತೊಗೆದು ರಾಜ್ಯಾಧಿಕಾರವನ್ನು ಕೈಗೊಳ್ಳಬಹುದಿತ್ತು (ಅಥವಾ ಅದಕ್ಕೆ ಪ್ರತಿಜ್ಞೆ ಅಡ್ಡ ಬರುವುದಾದರೆ, ತನ್ನದೇ ಮನೋಗತದಂತೆ ಅದನ್ನು ಪಾಂಡವರಿಗೆ ವಹಿಸಬಹುದಿತ್ತು). ಜನ್ಮಜಾತ ಹಕ್ಕಿನ ಜೊತೆ ಸ್ವತಃ ಪರಾಕ್ರಮಿಯಾದ ಭೀಷ್ಮನಿಗೆ ಇದೇನೂ ಕಷ್ಟವಾಗಿರಲಿಲ್ಲ. ಆದರೆ ಭೀಷ್ಮ ಆಯ್ದುಕೊಂಡದ್ದು ಕೇವಲ ದುರ್ಯೋಧನ ಆಸ್ಥಾನಿಕನಾಗಿ, ರಾಜ ಪಿತಾಮಹನಾಗಿ ಸಿಂಹಾಸನಕ್ಕೆ ನಿಷ್ಠನಾಗಿ ಮುಂದುವರೆಯುವುದಷ್ಟೇ. ಹೋಗಲಿ, ಆ ನಿಷ್ಠೆಯಾದರೂ ನಿಷ್ಕಳಂಕವಾಗಿ ಮುಂದುವರೆಯಿತೇ? ಬಹುಶಃ ಇಲ್ಲವೆಂದೇ ಹೇಳಬೇಕು.
ಕೌರವ ಸೈನ್ಯದ ಆಧಾರಸ್ಥಂಭಗಳಂತಿದ್ದ ಭೀಷ್ಮ ದ್ರೋಣ ಕರ್ಣರು ಒಂದಿಲ್ಲೊಂದು ಗೌಣ ಕಾರಣಗಳಿಂದ ಪಾಂಡವರಿಗೆ ಮೈಯೊಪ್ಪಿಸುತ್ತಾರೆ. ಕರ್ಣನೇನೋ ಕೊನೆಯವರೆಗೂ ನಿರ್ವ್ಯಾಜ ಸ್ವಾಮಿನಿಷ್ಠೆಯನ್ನು ಮೆರೆದರೂ ಕಪಟ-ಕುತಂತ್ರಗಳಿಗೆ ಬಲಿಯಾದ (ತನ್ನದೇ ವಚನಕ್ಕೆ, ದಾನಶೂರತ್ವಕ್ಕೆ ಕಟ್ಟುಬಿದ್ದು); ದ್ರೋಣ, ಮನವೆಲ್ಲಾ ಪಾಂಡವರ ಕಡೆಗಾದರೂ ಯುದ್ಧದ ಜವಾಬ್ದಾರಿಯನ್ನಾದರೂ ಪ್ರಾಮಾಣಿಕವಾಗೇ ನಿರ್ವಹಿಸಿದನೆನ್ನಬೇಕು - ಶಸ್ತ್ರವನ್ನು ತ್ಯಜಿಸುವುದಕ್ಕೆ ಮಗ ಸತ್ತನೆಂಬ ನೆಪ ಸಿಕ್ಕುವವರೆಗೂ! ಆದರೆ ಭೀಷ್ಮನನ್ನು ನೋಡಿ. ಅಜೇಯವೀರ, ಅವನೊಡನೆ ಕಾದಿ ಕಾದಿ ಸೋತು ಸುಣ್ಣವಾಗಿ ಬೇರೆ ದಾರಿ ಕಾಣದೇ ಅವನನ್ನು ಗೆಲ್ಲುವ ಬಗೆ ಹೇಗೆಂದು ಅವನ್ನೇ ಕೇಳುತ್ತಾರೆ ಪಾಂಡವರು! ಅದಕ್ಕೆ ಸ್ವತಃ ಭೀಷ್ಮ (ತಾನು ವಹಿಸಿದ್ದ ಕೌರವ ಪಕ್ಷದ ಹಿತ ಕಾಯ್ದುಕೊಳ್ಳಬೇಕಾದ ಭೀಷ್ಮ) ಅವರಿಗೆ ತನ್ನನ್ನು ಕೊಲ್ಲುವ ಬಗೆಯನ್ನು ಹೇಳಿಕೊಡುತ್ತಾನೆ!
******
ಮೊದಲಾಗಿ, ಕೌರವ ಸಂತಾನವೇ ತಡೆಯಲಾಗದ ಅಸೂಯೆಯ ಫಲ. ತುಂಬು ಗರ್ಭಿಣಿ ಗಾಂಧಾರಿ ಪುತ್ರೋತ್ಸವದ ಪ್ರತೀಕ್ಷೆಯಲ್ಲಿದ್ದಾಗ ತನಗಿಂತಲೂ ಮೊದಲು ಕುಂತಿಗೆ ಮಕ್ಕಳಾಗಿದ್ದನ್ನು ಕೇಳಿ ಉಕ್ಕಿ ಬಂದ ಈರ್ಷ್ಯೆಯನ್ನು ತಡೆಯಲಾಗದೆ ಬಲವಾಗಿ ಬಸಿರನ್ನು ಹೊಸೆದುಕೊಂಡಳಂತೆ. ಹೀಗೆ ಶತ ಛಿದ್ರವಾಗಿ ಹೊರಚೆಲ್ಲಿದ ಪಿಂಡವನ್ನು ವೇದವ್ಯಾಸರು ಔಶಧೀಭರಿತವಾದ ಪಾತ್ರೆಯಲ್ಲಿಟ್ಟು ಪೋಷಿಸಲಾಗಿ ಆ ನೂರೂ ಚೂರುಗಳು (ಅಥವಾ ನೂರೊಂದು, ಮೊದಲೇ ಕಂಡಂತೆ ಕೌರವರ ಸಂಖ್ಯೆ ಮುಖ್ಯವಾಗುವುದೇ ಇಲ್ಲ!) ನೂರು ಪ್ರತ್ಯೇಕ ಶಿಶುಗಳಾಗಿ ಬೆಳೆದುವಂತೆ.
ಮೊದಲಿನಿಂದಲೂ ಧೃತರಾಷ್ಟ್ರನ ಮಕ್ಕಳಿಗೂ ಪಾಂಡುವಿನ ಮಕ್ಕಳಿಗೂ ಮೇಲಾಟ ತಪ್ಪಲಿಲ್ಲ. ಸ್ವಭಾವತಃ ಚುರುಕಾದ ಪಾಂಡುಕುಮಾರರು ಎಲ್ಲದರಲ್ಲೂ ಕೌರವನಿಗೆ ಚಳ್ಳೆಹಣ್ಣು ತಿನ್ನಿಸುವವರೇ; ಕೈತಟ್ಟಿ ಪಕ್ಕೆ ತಿವಿದು ಏಡಿಸಿ ನಗುವರೇ. ಜಿದ್ದು, ಅಸೂಯೆ, ದ್ವೇಷಗಳೇ ನಿತ್ಯಾಹಾರ, ಸುಯೋಧನನಿಗೆ - ಅಜೀರ್ಣವೆನಿಸುವಷ್ಟು; ಪಾಂಡವರಿಗೆ ವಿಷದ ಲಡ್ದುಗೆಯನ್ನು ತಿನ್ನಿಸುವಷ್ಟು; ನೀರಲ್ಲಿ ಮುಳುಗಿಸಿಯೋ ವಿಷಸರ್ಪಗಳಿಂದ ಕಚ್ಚಿಸಿಯೋ ಕೊಲ್ಲುವಷ್ಟು; ಅರಗಿನ ಮನೆಯಲ್ಲಿ ಸುಟ್ಟು ಕಳೆದುಬಿಡುವಷ್ಟು! ಪಾಂಡವರ ಕುಹುಕದ ನಗೆ ಅಲ್ಲಿಗಾದರೂ ನಿಂತಿತೇ? ಮುಂದೆ, ಮಯನಿರ್ಮಿತ ಮಾಯಾ ಭವನದಲ್ಲಿ ಅತಿಥಿಯಾದ ಸುಯೋಧನ ಬಾಗಿಲೆಂದುಕೊಂಡು ಕನ್ನಡಿಗೆ ಢಿಕ್ಕಿ ಹೊಡೆದರೆ; ನೆಲವೆಂದುಕೊಂಡು ನೀರ ಹೊಂಡದೊಳಗೆ ಬಿದ್ದರೆ; ನೀರೆಂದುಕೊಂಡು ಕನ್ನಡಿಯ ನೆಲದ ಮೇಲೆ ಪಂಚೆ ಮೇಲೆತ್ತಿ ನಡೆಯುತ್ತಿದ್ದರೆ; ತನ್ನ ಭಾವನ ಪಾಡನ್ನು ನೋಡಿ ಸಹಾಯಕ್ಕೆ ಸೇವಕರನ್ನು ಕಳುಹಿಸುವ ಬದಲು ಆ ದ್ರೌಪದಿಯಂಥಾ ದ್ರೌಪದಿ ಕೈ ಚಪ್ಪಾಳೆಯಿಕ್ಕಿ ನಕ್ಕಳಲ್ಲಾ! ತನಗೇ ದಕ್ಕಬೇಕಿದ್ದ ದ್ರೌಪದಿ; ತನ್ನೆದುರೇ ತನ್ನ ವೈರಿ ಅರ್ಜುನ ಗೆದ್ದೊಯ್ದ ದ್ರೌಪದಿ; ಐವರು ಗಂಡರಿಗೆ ಹಂಚಿಕೊಂಡ ದ್ರೌಪದಿ - ಇದುವರೆಗೂ ನೆರಳಿನಂತೆ ಸಂಚರಿಸುತ್ತಿದ್ದ ಕೇಡು ಒಮ್ಮೆ ಆಕಳಿಸಿ ಮೈಕೊಡವಿದ್ದು ಅಲ್ಲಿ!
******
ಇಷ್ಟಕ್ಕೂ ಯಾರಿಗೆ ಬೇಕಿತ್ತು ಯುದ್ಧ? ಯಾರಿಗೂ ಇಲ್ಲ, ಅಥವ ಎಲ್ಲರಿಗೂ ಅನ್ನಬಹುದು. ಕಪಟನಾಟಕಸೂತ್ರಧಾರಿ ಕೃಷ್ಣ ಮನಸು ಮಾಡಿದ್ದರೆ ಸಂಧಿಯನ್ನು ಸಮಗೊಳಿಸುವುದು, ಪಾಂಡವರಿಗೆ ನ್ಯಾಯವಾಗಿ ಬರಬೇಕಾದ ರಾಜ್ಯಭಾಗವನ್ನು ದೊರಕಿಸಿ ಕೊಟ್ಟು ಮುಂದಾಗಲಿದ್ದ ಸರ್ವನಾಶವನ್ನು ತಪ್ಪಿಸುವುದು ಕಷ್ಟವೇನೂ ಇರಲಿಲ್ಲ. ಆದರೆ ಸಂಧಿಗೆ ಬರುವಮೊದಲೇ ಅವನು ಕೃಷ್ಣೆಗೆ ವಚನವೀಯುತ್ತಾನೆ, ಯುದ್ದವನ್ನು ಹೊತ್ತಿಸಿಯೇ ಬರುತ್ತೇನೆ ಎಂದು!
ದ್ರೌಪದಿಗೆ ಬೇಕಿತ್ತು ಯುದ್ಧ, ಭೀಮನ ಪ್ರತಿಜ್ಞೆಯಂತೆ ದುಃಶಾಸನನ ರಕ್ತದಿಂದ ತನ್ನ ಬಿಚ್ಚಿದ ಮುಡಿಯನ್ನು ನಾದಿಸಲು!
ಭೀಮನಿಗೆ ಬೇಕಿತ್ತು, ದ್ರೌಪದಿಯನ್ನು ತೊಡೆತಟ್ಟಿ ಕರೆದ ದುರ್ಯೋಧನನ ತೊಡೆ ಮುರಿಯಲು!
ಅರ್ಜುನನಿಗೆ ಬೇಕಿತ್ತು, ತನ್ನ ಪರಮವೈರಿಯಾದ ಕರ್ಣನನ್ನು ಕೊಚ್ಚಿಹಾಕಲು
ದ್ರುಪದನಿಗೆ ಬೇಕಿತ್ತು, ತನ್ನನ್ನೆಳೆತರಿಸಿ ಮಂಚಕ್ಕೆ ಕಟ್ಟಿಸಿದ ದ್ರೋಣನ ಮೇಲೆ ಸೇಡು ತೀರಿಸಿಕೊಳ್ಳಲು
ಶಿಖಂಡಿಗೆ ಬೇಕಿತ್ತು, ಅಂಬೆಯಾಗಿದ್ದ ತನ್ನನ್ನು ನಿರಾಕರಿಸಿ ಬದುಕನ್ನೇ ಹಾಳುಗೆಡವಿದ ಭೀಷ್ಮನನ್ನು ಸಂಹರಿಸಲು
ರಾಜ್ಯಕ್ಕಾಗಿ ಯುದ್ಧ ಎಂಬುದು ಮೇಲ್ನೋಟದ ಘೋಷಣೆಯಷ್ಟೇ. ಪ್ರತಿಯೊಬ್ಬ ವೀರನಿಗೂ ಕಾದಲು ತನ್ನದೇ ಕಾರಣಗಳು, ತೀರಿಸಲು ತನ್ನದೇ ಸೇಡುಗಳು. ಇನ್ನು ಧರ್ಮಕ್ಕಾಗಿ ಯುದ್ಧವೆಂಬ ಮಾತಂತೂ, ವಿಶ್ವನಿಯಾಮಕನ ಲೆಕ್ಕದ ಪುಸ್ತಕದಲ್ಲೆಲ್ಲೋ ಹೇಗೋ ತಾಳೆ ಹೊಂದಿರಬೇಕು; ಧರ್ಮ-ಸೂಕ್ಷ್ಮ! ಹಾಗಿಲ್ಲದಿದ್ದರೆ, ಯುದ್ಧದ ತುಂಬೆಲ್ಲವೂ ತಾಂಡವವಾಡುವುದು ಅಧರ್ಮವೇ? ಅದು ಅಭಿಮನ್ಯುವಿನ ವಧೆಯಿರಬಹುದು, ಕರ್ಣನ ಕೊಲೆಯಿರಬಹುದು, ಧುರ್ಯೋಧನನ ಸಂಹಾರವಿರಬಹುದು; ಸಾಕ್ಷಾತ್ ಧರ್ಮರಾಯ ಹೇಳುತ್ತಾನೆ "ಅಶ್ವತ್ಥಾಮೋ ಹತಃ (ಕುಂಜರಃ)"!
ಇನ್ನು ಕೌರವರ ಕಡೆಗೋ, "ದುಷ್ಟ"ಚತುಷ್ಟಯರೆನಿಸಿದ ದುರ್ಯೋಧನ, ದುಃಶಾಸನ, ಕರ್ಣ, ಶಕುನಿಗಳನ್ನು ಬಿಟ್ಟರೆ ಬೇರಾರಿಗೂ ಯುದ್ಧ ಬೇಕೇಬೇಕೆಂದು ಗಟ್ಟಿಯಾಗಿ ಅನಿಸಿದ್ದೇ ಇಲ್ಲ. ಧೃತರಾಷ್ಟ್ರ ಗಾಂಧಾರಿಯರಿಗೂ ಸಹ, ಯುದ್ಧವಾಗಬೇಕೆಂಬ ಅಭಿಲಾಷೆಗಿಂತ, ಯುದ್ಧವಾದರೆ ತಮ್ಮ ಮಕ್ಕಳು ಗೆಲ್ಲಬೇಕೆಂಬ ಆಶೆಯಷ್ಟೇ ಎದ್ದು ಕಾಣುವುದು. ಹೀಗೆ ಯಾರಿಗೂ ಯುದ್ಧ ಬೇಡದಿದ್ದರೂ ಪ್ರತಿಯೊಬ್ಬನೂ ಯುದ್ಧವನ್ನು ಆಗುಮಾಡಿಸುವೆಡೆಗೇ ದುಡಿಯುತ್ತಾನೆ.
4 comments:
ಭಿಷ್ಮ ನ ಬಗ್ಗೆ ಭೈರಪ್ಪ ನವರ ಪರ್ವ ದಲ್ಲು ಕೂಡ ಚೆನ್ನಾಗಿ ಚಿತ್ರಿತ ವಾಗಿದೆ.
ದೃತ ರಾಷ್ಟ್ರ ನಿಗೆ ಪುತ್ರ ವ್ಯಾಮೊಹ, ದುರ್ಯೊದನ ನಿಗೆ ಮೊದಲಿನಿ೦ದ ಬೆಳೆದು ಬ೦ದ ಸೇಡು, ಪಾ೦ಡವರಿಗೆ ಸೇಡಿಗೆ, ರಾಜ್ಯ ಕೆ ಯುದ್ದ ಬೇಕಿತ್ತು.
ಮ೦ಜುನಾಥ ಅವರೆ, ಒಳ್ಳೆಯ ಪ್ರಯತ್ನ.
ಲೇಖನ ಚೆನ್ನಾಗಿ ಮೂಡಿದೆ.
ಸರಣಿ ಚೆನ್ನಾಗಿ ಮೂಡಿಬರುತ್ತಿದೆ, ಆದರೆ ಯಾಕೋ ನಿಂತಂತಿದೆ.
ಮಂಜುರವರೆ, ಆದರೆ ತಮಗೇಕೋ ಭೀಷ್ಮರ ಮೇಲೆ ಒಂದು ವಿಧವಾದ ಪೂರ್ವಾಗ್ರಹವಿದ್ದಂತೆ ಕಾಣುತ್ತದೆ; ಅಥವಾ ಹಾಗೆ ಹೇಳಲು ಇದು too early ಇರಬಹುದು, just a thought ಅಷ್ಟೇ. ದಯವಿಟ್ಟು ಮುಂದುವರೆಸಿ, ಕಾಯುತ್ತಿದ್ದೇವೆ.
ಚಾರ್ವಾಕ, ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ನಿಮ್ಮ ಮಾತು ನನ್ನನ್ನೂ ಯೋಚನೆಗೆ ಹಚ್ಚಿತು; ಭೀಷ್ಮರ ಬಗ್ಗೆ ನನಗೆ ಪೂರ್ವಾಗ್ರಹ ಹೌದೇ? ನಿಮ್ಮ ಮಾತಂತೂ ನಿಜ, it is too early to conclude that. ಮೊದಲೇ ಹೇಳಿದಂತೆ ಇಡೀ ಲೇಖನ ಮಾಲೆ, ನಾನು ಭಗವದ್ಗೀತೆಯನ್ನು ಓದುತ್ತಿದ್ದಂತೆ ನನ್ನ ಮನದಲ್ಲಿ ಮೂಡುತ್ತಾ ಹೋಗುವ ಆಲೋಚನೆಗಳ ದಾಖಲೆ ಅಷ್ಟೇ. ಆದ್ದರಿಂದ ಅಲ್ಲಿ ಒಂದು ನಿಶ್ಚಿತ ಅಭಿಪ್ರಾಯ, ನಿಲುವು, ಪೂರ್ವಾಗ್ರಹಗಳನ್ನು ಕಾಣಹೊರಡುವುದು ಅರ್ಥಹೀನವೆನ್ನಿಸುತ್ತದೆ; ಏಕೆಂದರೆ ಈ ಅಧ್ಯಾಯದಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯ, ಮುಂದಿನ ಲೇಖನದಲ್ಲಿ ಬದಲಾಗಬಹುದು.
ಇದು ಹೇಗೆ ಸಾಗಬಹುದೆನ್ನುವ ಕುತೂಹಲ ನನಗೂ ಇದೆ. ಬರೆಯಲು ಉತ್ಸುಕನಾಗಿದ್ದೇನೆ. ಆದಷ್ಟು ಬೇಗ ಮುಂದುವರೆಸುತ್ತೇನೆ.
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
Post a Comment