ಶೀರ್ಷಿಕೆಗಳು

Thursday, November 18, 2010

ಕುತಸ್ತ್ವಾ ಕಶ್ಮಲಮಿದಂ?

ಕೃಷ್ಣನ ಪರಿಸ್ಥಿತಿಯನ್ನೊಮ್ಮೆ ನೋಡಿ - ಪರಮ ಪುರುಷ, ಗೀತಾಚಾರ್ಯ ಇತ್ಯಾದಿ ಆಯಾಮಗಳನ್ನೆಲ್ಲ ಒಂದು ಕ್ಷಣ ಮರೆತು ನೋಡಿ, ಕೇವಲ ಒಬ್ಬ ಚಾಣಾಕ್ಷ ಮಾನವನಾಗಿ.

ಅರಿತೋ ಅರಿಯದೆಯೋ, ಬೇಕಿದ್ದೋ ಬೇಡದೆಯೋ ಅವನಿಂದು ಪಾಂಡವ ಬಣದ ಮಹಾನಾಯಕ. ಕೇವಲ ಪಾರ್ಥಸಾರಥಿಯಲ್ಲ, ಪಾರ್ಥನ ರಥನಡೆಸುವವನಲ್ಲ, ಇಡೀ ಪಾಂಡವಬಲವನ್ನು ಮುನ್ನಡೆಸುವವನು. ಭೀಮಾರ್ಜುನರೇ ಮುಂತಾದ ಅತಿರಥ ಮಹಾರಥರಿದ್ದರೂ ಅವರೆಲ್ಲಾ ಕೇವಲ ಕೃಷ್ಣನ ಕೈಬೊಂಬೆಗಳೇ. ಕೌರವಸೇನೆಗಿರುವಂತೆ ಯುದ್ಧದ ವ್ಯೂಹ ನಿರ್ಮಿಸುವ ದ್ರೋಣರಾಗಲಿ, ರಣತಂತ್ರವನ್ನು ರೂಪಿಸುವ ಭೀಷ್ಮರಾಗಲಿ ಪಾಂಡವರಿಗಿಲ್ಲ. ಯುದ್ಧತಂತ್ರವನ್ನು ರೂಪಿಸುವುದರಿಂದ ಹಿಡಿದು ರಣರಂಗದಲ್ಲಿ ರಥ ನಡೆಸುವವರೆಗೂ ಯುದ್ಧದ ಸಕಲನಿರ್ವಹಣೆಯೂ ಕೃಷ್ಣನದೇ. ಪಾಂಡವರ ಸೋಲೋ ಗೆಲುವೋ ಮಾನವೋ ಅಪಮಾನವೋ ಎಲ್ಲವೂ ಕೃಷ್ಣನದೇ. ಹೀಗಿರುವಾಗ - ಯುದ್ಧವನ್ನೇ ಲಕ್ಷ್ಯದಲ್ಲಿಟ್ಟ ತನ್ನ "ಸಂಧಿ"ಯ ಮಾತುಗಳೆಲ್ಲಾ ನಿಷ್ಫಲವಾಗಿ ದುರ್ಯೋಧನ ಸಡ್ಡುಹೊಡೆದು ನಿಂತಿರುವಾಗ; ಸ್ವತಃ ಭೀಮಾರ್ಜುನರೇ ಉತ್ಸುಕರಾಗಿ ಕುಣಿದು ಕುಣಿದು ಯುದ್ಧವನ್ನೂ ಘೋಷಿಸಿರುವಾಗ, ಯುದ್ಧಾರಂಭಕ್ಕೆ ಕೊನೆಯ ಸೂಚನೆಯಾಗಿ ರಣಕಹಳೆಯೂ ಮೊಳಗಿಬಿಟ್ಟಿರುವಾಗ - ಪಾಂಡವಸೇನೆಯ ಮುಂಚೂಣಿ ನಾಯಕನಾದ ಅರ್ಜುನ ಹೀಗೆ ಕೈಕುಸಿದು "ನನಗೆ ಯುದ್ಧ ಬೇಡ" ಎಂದು ಕುಳಿತುಬಿಟ್ಟರೆ, ಕೃಷ್ಣನಿಗೆ ಹೇಗಾಗಬೇಡ. ಇದನ್ನು ಹೇಳಬಂದ ಕಾರಣವಿಷ್ಟೇ. ಜಗದ್ಗುರುವಾಣಿಯಾದ ಭಗವದ್ಗೀತೆ ಅಂಥಾದ್ದೊಂದು ಹಣೆಪಟ್ಟಿಯನ್ನೇನು ಹೊತ್ತುಕೊಂಡು ಶುರುವಾಗುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯಮಾನವನಾದ ಅರ್ಜುನ, ಅಪ್ರತಿಮ ಚಾಣಾಕ್ಷನಾದ ಕೃಷ್ಣನಿಗೆ ಯುದ್ಧದಂಥಾ ವಿಷಮಪರಿಸ್ಥಿತಿಯಲ್ಲಿ ತಂದೊಡ್ಡಿಬಿಡುವ ಸಂದಿಗ್ಧವಾಗಿ; ಹೇಗಾದರೂ ಯುದ್ಧವನ್ನು ನಿರ್ವಹಿಸಲೇಬೇಕಾದ ಕೃಷ್ಣ ತನ್ನ ವೀರನಿಗೆ ಕೊಡುವ motivational counselling ಆಗಿ ಶುರುವಾಗುತ್ತದೆ, ಈ ಪ್ರಸಂಗ. ಕತೆಯ ಓಟದಲ್ಲಿ ಈ ಕ್ಷಣಕ್ಕೆ ಕೃಷ್ಣ ಕೇವಲ ಒಬ್ಬ war-lord ಅಷ್ಟೇ; ಯುದ್ಧ ನಡೆಯುವುದಷ್ಟೇ ಮುಖ್ಯ. ಆದರೆ ಮುಖ್ಯಪಾತ್ರಧಾರಿಯೇ ಹೀಗೆ ಕೈಕೊಟ್ಟರೆ ಯುದ್ಧ ನಿರ್ವಹಿಸಬೇಕಾದ ಕೃಷ್ಣನ ಕತೆಯೇನು? ಕೈಕಾಲು ಕುಸಿದು ಶೋಕಸಂವಿಘ್ನಮಾನಸನಾಗಿ ಕಣ್ಣೀರಿಡುತ್ತಾ ಕುಳಿತ ಅರ್ಜುನನಿಗೆ ಕೃಷ್ಣ ಹೇಳುವುದನ್ನು ನೋಡಿ: "ಕುತಸ್ತ್ವಾ ಕಶ್ಮಲಮಿದಂ, ವಿಷಮೇ ಸಮುಪಸ್ಥಿತಂ?"

"ಅರ್ಜುನಾ, ಕೊನೇಕ್ಷಣದಲ್ಲಿ ಇದೇನಯ್ಯ ವಿಪರೀತ - ಮರ್ಯಾದಸ್ತರಿಗೆ ಒಗ್ಗದ, ಸ್ವರ್ಗಕ್ಕೆ ಸಲ್ಲದ, ನಾಚಿಕೆಗೇಡಿನ ಯೋಚನೆ?" (ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಂ - ಅನಾರ್ಯಜುಷ್ಟಮಸ್ವರ್ಗ್ಯಂ ಅಕೀರ್ತಿಕರಮರ್ಜುನ?). ಒಬ್ಬ typical floor managerನ ಮಾತಲ್ಲವೇ ಇದು? ಈ ಕ್ಷಣಕ್ಕೆ ಅರ್ಜುನನ ಆತ್ಯಂತಿಕ ಕರ್ತವ್ಯ ಯುದ್ಧ - ಐಹಿಕ, ಆಧ್ಯಾತ್ಮಿಕ ದೃಷ್ಟಿಗಳೆರಡರಲ್ಲೂ; ಇದು ಕೃಷ್ಣನಿಗೆ ತಿಳಿದಿದೆ. ಅರ್ಜುನನಿಗೆ ಅದು ತಿಳಿದಿದೆಯೋ ತಿಳಿದಿಲ್ಲವೋ, ಒಟ್ಟಿನಲ್ಲಿ ಅವನು ಯುದ್ಧ ಮಾಡಬೇಕು, ಅಷ್ಟೇ. ಅದಕ್ಕೆಂದೇ ಈ ಹಂತದಲ್ಲಿ ಕೃಷ್ಣ ಯಾವ ತತ್ತ್ವೋಪದೇಶದಲ್ಲೂ ತೊಡಗುವುದಿಲ್ಲ. "What non-sense are you doing?" ಅನ್ನುವಂಥ ಐಹಿಕಮಟ್ಟದ ಗದರಿಕೆಗಳಿಂದ ಅರ್ಜುನ ಜಗ್ಗುವುದಾದರೆ ಜಗ್ಗಿಬಿಡಲಿ, ಇದು ಕೃಷ್ಣನ ಹಂಚಿಕೆ. ಇದೇ ಧೋರಣೆಯಲ್ಲೇ ಮುಂದುವರೆದು ಹೇಳುತ್ತಾನೆ ಕೃಷ್ಣ "ಪಾರ್ಥಾ, ಷಂಡತನ ನಿನಗೆ ಹೇಳಿದ್ದಲ್ಲ, ಈ ಕ್ಷುದ್ರವಾದ ಹೃದಯದೌರ್ಬಲ್ಯವನ್ನು ಬಿಟ್ಟು ಎದ್ದೇಳು" (ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ ತ್ವಯ್ಯುಪಪದ್ಯತೇ, ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ)

ಆದರೆ ಅರ್ಜುನ ಅಷ್ಟಕ್ಕೆಲ್ಲ ಜಗ್ಗುವ ಪಿಂಡವಲ್ಲ. ಆದ್ಯಂತ ಕರ್ತವ್ಯಪರಾಯಣನಾದ ಅರ್ಜುನ, ತನಗಲ್ಲದ ಕೆಲಸವನ್ನು ಹೇಗೆತಾನೆ ಮಾಡಿಯಾನು, ಅದೂ ಹಾಗೆ ಮಾಡಬಾರದೆಂಬ ನಿಚ್ಚಳ ಅರಿವು ತನ್ನಲ್ಲಿರುವಾಗ? ತನ್ನ ಸಂದಿಗ್ಧವನ್ನು ಈಗಾಗಲೇ ಬಿಡಿಸಿ ಬಿಡಿಸಿ ಹೇಳಿಯಾಗಿದೆ; ತನ್ನ ಅಭಿಪ್ರಾಯವನ್ನು ಬದಲಿಸುವ ಸಮಾಧಾನಗಳೊಂದೂ ಕಾಣುತ್ತಿಲ್ಲ; ತಾನು ಈ ಕ್ಷಣ ತಳೆದಿರುವ ನಿಲುವು ಹೇಡಿತನದ್ದಲ್ಲವೆಂದು ತನ್ನಷ್ಟೇ ಕೃಷ್ಣನಿಗೂ ಗೊತ್ತಿದೆ, ಮತ್ತೆ ಹೇಡಿತನದ ಮಾತೇಕೆ? ಕೇವಲ ಇವನ ಅವಹೇಳನಕ್ಕಂಜಿ ಬಂಧುಹತ್ಯೆಯಂಥ ಪಾಪಕಾರ್ಯಕ್ಕೆ ಕೈಹಾಕಬೇಕೇ? ಅದಕ್ಕೆಂದೇ ತಾನು ಮೊದಲು ಹೇಳಿದ್ದನ್ನೇ ಮತ್ತೆ ಹೇಳುತ್ತಾನೆ ಅರ್ಜುನ. "ಪೂಜ್ಯರಾದ ಭೀಷ್ಮ-ದ್ರೋಣರನ್ನು ಹೇಗೆತಾನೆ ಹೊಡೆಯಲಿ? ಅಂಥ ಮಹಾನುಭಾವರನ್ನು ಕೊಂದು ಅವರ ರಕ್ತದಲ್ಲಿ ತೊಯ್ದ ರಾಜ್ಯಭೋಗಗಳನ್ನು ಅನುಭವಿಸುವುದಕ್ಕಿಂತ ಭಿಕ್ಷೆಯೆತ್ತಿ ಬದುಕುವುದು ಲೇಸಲ್ಲವೇ?"

ಇದನ್ನು ಹೇಳುವಾಗ, ಇದೆಲ್ಲ ಕೃಷ್ಣನಿಗೆ ತಿಳಿಯದ್ದೇನಲ್ಲವೆಂಬ ಅರಿವು ಅರ್ಜುನನಿಗಿದೆ. ಅಷ್ಟಾಗಿಯೂ ಕೃಷ್ಣನು ತನ್ನನ್ನು ಯುದ್ಧಮಾಡಲೇಬೇಕೆಂದು ಒತ್ತಾಯಿಸುತ್ತಿರುವುದರಲ್ಲಿ ಏನೋ ಅರ್ಥವಿರಬೇಕೆಂದೂ ಅನಿಸುತ್ತಿದೆ. ಪಾಂಡವರೇ ತನ್ನ ಪ್ರಾಣವೆಂದಿರುವ ಕೃಷ್ಣನ ಮಾತಿನಲ್ಲಿ ಕಪಟವೇನೂ ಇರಲಾರದು. ಹಾಗಿದ್ದರೆ ಅವನು ಹೇಳುತ್ತಿರುವುದೇ ಸರಿಯೇ? ಯುದ್ಧದ ಕೆಡುಕನ್ನು ತಾನು ಇಷ್ಟುಬಗೆಯಾಗಿ ವಿವರಿಸಿದಮೇಲೂ ಕೃಷ್ಣ ತೋರುವ ಈ ಸ್ಥಿರತೆ (conviction) ಅರ್ಜುನನ್ನು ಗೊಂದಲಗೊಳಿಸುತ್ತದೆ. ಈಗ ತನಗೆ ಯಾವುದು ಹೆಚ್ಚು, ಯಾವುದು ಸರಿ, ಯುದ್ಧದಲ್ಲಿ ತಾವು ಗೆಲ್ಲುತ್ತೇವೋ ಕೌರವರೋ ಒಂದೂ ತಿಳಿಯದಾಗಿದೆ. ಯಾವ ಕೌರವರನ್ನು (ತಮ್ಮಂದಿರನ್ನು) ತಾನು ಕೊಂದು ಬದುಕಲಿಚ್ಛಿಸುವುದಿಲ್ಲವೋ ಅವರೇ ಈಗ ಎದುರುನಿಂತಿದ್ದಾರೆ; ಕೃಷ್ಣನೋ ಯುದ್ಧಮಾಡೆಂದು ಒತ್ತಾಯಿಸುತ್ತಿದ್ದಾನೆ; ಇದೆಲ್ಲದರ ಗಲಿಬಿಲಿಯಿಂದ ದಿಙ್ಮೂಢನಾಗಿ ಅರ್ಜುನ ಕೊನೆಗೆ ಕೈಮುಗಿದುಬಿಡುತ್ತಾನೆ - "ಕೃಷ್ಣಾ, ನಿನಗೆ ಶರಣುಬರುತ್ತೇನೆ, ನಿನ್ನ ಶಿಷ್ಯ ನಾನು; ಇದೆಲ್ಲ ಗೊಂದಲದಿಂದ ನನಗಂತೂ ದಿಕ್ಕುತೋರದಂತಾಗಿದೆ, ಧರ್ಮಬುದ್ಧಿಗೆ ಮಂಕುಕವಿದಿದೆ. ಯಾವುದು ಧರ್ಮಸಮ್ಮತವೋ, ಯಾವುದು ಶ್ರೇಯಸ್ಕರವೋ ಅದನ್ನೊಂದು ನಿಶ್ಚಯಿಸಿ ನನಗೆ ಹೇಳಿಬಿಡು ಮಹಾರಾಯ; ನನಗಂತೂ ದೇವಲೋಕದ ಒಡೆತನವೇ ಬಂದರೂ, ನನ್ನ ಶತ್ರುಗಳೆಲ್ಲಾ ನಿರ್ನಾಮವಾಗಿಹೋದರೂ ಮೈಮನಗಳನ್ನೆಲ್ಲಾ ಸೋಸಿಬಿಡುತ್ತಿರುವ ಈ ನೋವಿನಿಂದ ಬಿಡುಗಡೆಯೇ ಇಲ್ಲವೆನ್ನಿಸುತ್ತದೆ"

ಇಷ್ಟುಹೇಳಿ "ಇಲ್ಲಪ್ಪಾ, ನಾನಂತೂ ಯುದ್ಧಮಾಡಲಾರೆ" ಎಂದು ಸುಮ್ಮನಾಗುತ್ತಾನೆ, ಅರ್ಜುನ.

7 comments:

sunaath said...

ಮಂಜುನಾಥರೆ,
ಅರ್ಜುನನು ಪರಮಕ್ಷತ್ರಿಯನು. ಹೋರಾಡಲು ಹೇಸದವನು. ವೈಯಕ್ತಿಕವಾಗಿ ಅನೇಕರನ್ನು ಕೆಡವಿದವನು. ಅಂಥವನು ಕೇವಲ ತನ್ನ ಗುರು-ಹಿರಿಯರನ್ನು ಹಾಗು ಬಳಗವನ್ನು ಕಂಡು ಯುದ್ಧಪರಾಂಙ್ಮುಖನಾದನೆಂದು ನನಗೆ ಅನಿಸುವದಿಲ್ಲ. ಅರ್ಜುನನ ತರ್ಕ ಮುಂದಿನ ಭಾಗದಲ್ಲಿದೆ. ಸಾವಿರಸಾವಿರ ಜನ ಗಂಡಸರು ಸತ್ತ ಮೇಲೆ, ಅವರನ್ನು ಅವಲಂಬಿಸಿದವರ ಗತಿ ಏನು? ಆ ಸ್ತ್ರೀಯರು ಹೊಟ್ಟೆ ಪಾಡಿಗಾಗಿ ಹಾಗು ಮುಂದಿನ ಬದುಕಿಗಾಗಿ ಏನು ಮಾಡಲಿಕ್ಕಿಲ್ಲ?
ಇದು ಅರ್ಜುನನ ಸಂಕಟ. ಇಂತಹ ಪರಿಸ್ಥಿತಿಯು ಜಾಗತಿಕ ಯುದ್ಧಗಳಲ್ಲಿ ಸಂಭವಿಸಿದ್ದದ್ದು ಎಲ್ಲರಿಗೂ ತಿಳಿದದ್ದೇ. ಆದರೆ, ನೀವು ಸರಿಯಾಗಿ ಹೇಳಿದ್ದೀರಿ:ಕೃಷ್ಣನಿಗೆ ಯುದ್ಧ ಬೇಕಾಗಿತ್ತು.
Let the world go to hell.ತನ್ನವರಿಗಾದ ಅನ್ಯಾಯ ಹಾಗು ಅವಮಾನಗಳ ಪರಿಮಾರ್ಜನೆ ಅವನಿಗೆ ಬೇಕಾಗಿತ್ತು. ಅದಕ್ಕೆಂದೇ ಆತ ಅರ್ಜುನನನ್ನು ಪ್ರೇರೇಪಿಸಿದ!

Manjunatha Kollegala said...

ಸುನಾಥರೇ, ಪ್ರತಿಕ್ರಿಯೆಗೆ ಧನ್ಯವಾದ. ನನಗನ್ನಿಸುವಂತೆ, ಭಗವದ್ಗೀತೆ, ಅಷ್ಟೇಕೆ ಇಡೀ ಮಹಾಭಾರತದ ಕಥಾನಕ ವ್ಯಾವಹಾರಿಕದಿಂದ ಹಿಡಿದು ಅತ್ಯಾಧ್ಯಾತ್ಮಿಕವಾದ ಅನೇಕ ಪದರಗಳಿವೆ. ಅರ್ಜುನನ ಕ್ರೋಧ-ದ್ವೇಷಗಳೆಷ್ಟು ನಿಜವೋ ಅಷ್ಟೇ ನಿಜ ಯುದ್ಧದಲ್ಲಿ ಅವನ ಕೈತಡೆಯುವ ಅವನ ಬಂಧುಪ್ರೀತಿ, ಮತ್ತೂ ಅಷ್ಟೇ ನಿಜ ಸರ್ವಜನ ನಾಶದ ಅವನ ಧರ್ಮಸಂಕಟ; ಅಂತೆಯೇ ಕತೆಯ ಮಟ್ಟದಲ್ಲಿ ಭಗವದ್ಗೀತೆಯು at any cost "ತನ್ನವರಿ"ಗಾದ ಅನ್ಯಾಯಗಳ ಪರಿಮಾರ್ಜನೆಗಾಗಿ ಯುದ್ಧಕ್ಕೆ ಪ್ರೇರೇಪಿಸುವ "ವ್ಯವಹಾರೀ" ಭಕ್ತಕುಟುಂಬಿಯ ತಂತ್ರವೆಂದಷ್ಟೇ ನಿಜ, ಆಧ್ಯಾತ್ಮಿಕತೆಯ ಮಟ್ಟದಲ್ಲಿ ಜಗನ್ನಿಯಾಮಕದಲ್ಲಿ ಜೀವಿಗಳ ಪಾತ್ರದ ಅಲ್ಪತ್ವನ್ನೂ ಮಹತ್ವವನ್ನೂ ವಿಶ್ವರೂಪದರ್ಶನದ ವಿರಾಟ್ ಭಿತ್ತಿಯಲ್ಲಿ ಚಿತ್ರಿಸುವ, ಕರ್ಮ-ಜ್ಞಾನ-ಭಕ್ತಿಗಳ ಸ್ವರೂಪೌಚಿತ್ಯಗಳನ್ನು ಉಪದೇಶಿಸುವ ಪರಮಪುರುಷನ ವಾಣಿ ಕೂಡ.

V.R.BHAT said...

ಕೃಷ್ಣ ಅನುಭವಿಸಿದ ಸಂದಿಗ್ಧಗಳನ್ನು ಬಹುತೇಕರು ತಿಳಿಯಲೇ ಇಲ್ಲ ! ಮನುಷ್ಯನಾಗಿ ಜನಸಾಮಾನ್ಯರಿಗೆ ಇರುವದಕ್ಕಿಂತ ಹೆಚ್ಹಿನದಾದ ಸಮಸ್ಯೆಗಳು ಅವನಲ್ಲಿದ್ದವು. ಆದರೆ ತನ್ನ ಸಮಸ್ಯೆಗಳನ್ನು ಪಕ್ಕಕ್ಕೊತ್ತಿ ಆತ ಜನರಿಗೆ ಸಹಾಯಮಾುತ್ತಿದ್ದ, ನೊಂದವರ/ಆರ್ತರ ಅಹವಾಲನ್ನು ಸ್ವೀಕರಿಸಿ ಪರಿಹಾರ ಕಾಣಿಸುತ್ತಿದ್ದ. ಈ ವತ್ಯಾಸವೇ ಆತನನ್ನು ದೇವರು ಎಂಬ ಮಟ್ಟಕ್ಕೆ ಬೆಳೆಸಿತು. ಹರಿಯ ಮೇಲಿನ ನಿಮ್ಮ ಲಹರಿ ಚೆನ್ನಾಗಿದೆ.

Manjunatha Kollegala said...

ಧನ್ಯವಾದ ಭಟ್ಟರೇ, ನಿಮ್ಮ ಕಾಮೆಂಟಿಗೆ. ಬರುತ್ತಿರಿ

bkjagadish said...

ಪ್ರಿಯ ಮಂಜುನಾಥರೆ !!,

ಭಗವದ್ಗೀತೆ ಓದುವುದು , ಮನನ ಮಾಡುವುದು ನನ್ನ ಹೃದಯಕ್ಕೆ ಹತ್ತಿರವಾದ ಒಂದು ಹವ್ಯಾಸ, ಪ್ರೀತಿಯ ಕ್ರಿಯೆ !...ಈ ನಿಟ್ಟಿನಲ್ಲಿ ನಿಮ್ಮ ಬ್ಲಾಗ್ ನನಗೆ ಅಧ್ಯಯನಕ್ಕೆ ಒಂದು ಹೊಸ ಬಾಗಿಲನ್ನು ತೆರೆದಂತಾಗಿದೆ !!...ಪುಸ್ತಕ ರೂಪಕ್ಕೆ ತಂದಾಗ ನನಗೆ ತಿಳಿಸಲು ಮರೆಯದಿರಿ ....ನಾನೇ ಸ್ವತ: ಬಂದು ಕೊಂಡುಕೊಳ್ಳುತ್ತೇನೆ ...ನನಗೆ ಈಗ ೬೩ ವರುಷ , ಸ್ವಂತ ಉದ್ಯೋಗಿ , ಪುಸ್ತಕ ಓದುವುದು, ಈಜುವುದು ಮತ್ತು ನನ್ನ ಮಗಳ ಭವಿಷ್ಯದ ಬಗ್ಗೆ ನನ್ನ ಕೈಲಾದದನ್ನು ಮಾಡುವುದು ಇಷ್ಸ್ತೆ ನನ್ನ ಜೀವನದ ಗುರಿಯಾಗಿದೆ !!!...ಹಾಗೆ ಸುಮ್ಮನೆ ಹೇಳಬೇಕೆನಿಸಿತು ಅನ್ಯಥಾ ಭಾವಿಸಬೇಡಿ !...ನೀವು ಮಾಡುತ್ತಿರುವ ಈ ಅಪೂರ್ವ ಕೈಂಕರ್ಯಕ್ಕೆ ನನ್ನ ಧನ್ಯವಾದಗಳು !!!...

Manjunatha Kollegala said...

ಪ್ರಿಯ ಜಗದೀಶ್,

ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ. ತಮ್ಮ ಅಭಿಮಾನಕ್ಕೆ ನಾನು ಋಣಿ. ಕೇವಲ ನನ್ನ ಕುತೂಹಲ/ಅಧ್ಯಯನಕ್ಕಾಗಿ ತೆರೆದುಕೊಂಡ ಲೇಖನಮಾಲೆ ತಮ್ಮಲ್ಲಿ ಹೊಸ ಕುತೂಹಲ ಮೂಡಿಸಿದರೆ ಅದಕ್ಕಿಂತ ಸಂತಸ ಬೇರೇನಿದೆ. ಈ ವಯಸ್ಸಿನಲ್ಲಿ ತಮ್ಮ ಉತ್ಸಾಹ ನಮಗೆ ಖಂಡಿತ ಸ್ಫೂರ್ತಿಯನ್ನುಂಟುಮಾಡುವುದು. ಬರುತ್ತಿರಿ.

Badarinath Palavalli said...

ಯುದ್ಧ ವಿಮುಖನಾಗುವ ಅರ್ಜುನನ ಮನಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಡುವ ಲೇಖನ.

ಈ ಬ್ಲಾಗ್ ೨೦೧೦ರಿಂದ ಖಾಲಿ ಇದೆ. ಲೇಖಕರು ಇತ್ತ ಮನಸ್ಸು ಮಾಡಬೇಕಾಗಿ ವಿನಂತಿ.