ಶೀರ್ಷಿಕೆಗಳು

Monday, August 9, 2010

ಸೇನಯೋರುಭಯೋರ್ಮಧ್ಯೇ...

"ಕೌರವರ(ನ) ಹುಟ್ಟಿನಿಂದ ಹಿಡಿದು ಇಂದಿನವರೆಗೆ, ಕೌರವ-ಪಾಂಡವರ ಬದುಕು ರೂಪಿಸುತ್ತಾ, ಕೌರವ ಪಾಂಡವರನ್ನೂ ಒಳಗೊಂಡಂತೆ ಹದಿನೆಂಟು ಅಕ್ಷೋಹಿಣಿಯ ಮಹಾಸೇನೆಯನ್ನು ಇಂದು ಈ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಿಯೋಜಿಸಲು ಕಾರಣವಾದ ಘಟನೆಗಳೆಲ್ಲದರ ಪಡಿನೆಳಲು ಇವತ್ತು ಇಡೀ ಯುದ್ಧಭೂಮಿಯನ್ನು ಆವರಿಸಿದೆ, ಮುಂದಿನ ಮಹಾವಿಪತ್ತಿನ ವಿಷಾದಪೂರ್ಣವಾದ ಮುನ್ನುಡಿಯೆಂಬಂತೆ" ಎಂದೆ. ಹೌದೇ?

ಮುಂದೆ ಬರುವುದು ನಿಜಕ್ಕೂ ಮಹಾವಿಪತ್ತೇ? ನಡೆಯಲಿರುವುದು ಧರ್ಮಯುದ್ಧ. ಕೌರವರು ಅಧರ್ಮದಿಂದ ಪಾಂಡವರ ರಾಜ್ಯ ಕಸಿದಿದ್ದಾರೆ, ಅವರನ್ನು ಪಡಬಾರದ ಕಷ್ಟಗಳಿಗೀಡುಮಾಡಿದ್ದಾರೆ, ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅತಿ ನೀಚರೀತಿಯಲ್ಲಿ ಅವಮಾನಿಸಿದ್ದಾರೆ, ಕೊನೆಗೆ ಕಾಡಿಗಟ್ಟಿದ್ದಲ್ಲದೇ ಅಲ್ಲೂ ನೆಮ್ಮದಿಯಿಂದಿರಲು ಬಿಟ್ಟಿಲ್ಲ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಪಾಂಡವರು ತಮ್ಮ ಕರಾರನ್ನು ಪೂರೈಸಿ ಈಗ ಮರಳಿ ಬಂದಿದ್ದಾರೆ, ತಮಗೆ ನ್ಯಾಯವಾಗಿ ಸಲ್ಲಬೇಕಾದ ರಾಜ್ಯವನ್ನು ಕೇಳಿದ್ದಾರೆ, ಅದೂ ಬಲಪ್ರಯೋಗದಿಂದಲ್ಲ, ಸಾಮದಿಂದ, ದಾನದಿಂದ, ಕೊನೆಗೆ ಭೇದದಿಂದ ಕೂಡ. ಅದಾವುದೂ ನಡೆಯದೇ ಕೊನೆಗೆ ದಂಡದ ದಾರಿ ಹಿಡಿದಿದ್ದಾರೆ, ಅದೂ ಏಕಮುಖವಾದ ದಂಡಪ್ರಯೋಗವಲ್ಲ. ಸಂಧಾನ ನಡೆಸಿದ್ದಾರೆ, ಅದು ಫಲಕೊಡದಿದ್ದಮೇಲೆ ಕ್ರಮಬದ್ಧವಾಗಿ ಯುದ್ಧದ ಆಹ್ವಾನ ನೀಡಿದ್ದಾರೆ, ಎರಡೂ ಪಕ್ಷದವರೂ ಭರತಖಂಡದ ಎಲ್ಲ ದೊರೆಗಳೊಡನೆ ರಾಜತಾಂತ್ರಿಕ ಮಾರ್ಗದಲ್ಲಿ ಬೆಂಬಲ ಬೇಡಿದ್ದಾರೆ/ಪಡೆದಿದ್ದಾರೆ. ಭೂಮಿಯ ಒಡೆತನಕ್ಕೆ ಇರುವ ಆತ್ಯಂತಿಕ ಪರೀಕ್ಷೆ, ಯುದ್ಧ. ಯಾರು ತೋಳ್ಬಲದಿಂದ ಭೂಮಿಯನ್ನು ಗೆಲ್ಲುವರೋ ಅವರೇ ಅದರ ಒಡೆಯರು. ಯುದ್ಧವೆಂದಮೇಲೆ ಒಂದುಪಕ್ಷ ಸೋಲುತ್ತದೆ/ನಾಶವಾಗುತ್ತದೆ, ಒಂದುಪಕ್ಷ ಗೆಲ್ಲುತ್ತದೆ, ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಇದರಲ್ಲಿ ಮಹಾವಿಪತ್ತೇನು ಬಂತು?

ಮೇಲ್ನೋಟಕ್ಕೆ ಇದು ಸುಲಭದ, ಸರ್ವ ಸಮ್ಮತ ತರ್ಕ. ಆದರೆ ನೋಡಿ, ಇದು ಯಾರೋ ಬೇರೆ ಜನದ/ಜನಾಂಗದೊಡನಿನ ಯುದ್ಧವಲ್ಲ. ಎದುರಿಸಿ ನಿಂತವರು ಸ್ವಂತ ಅಣ್ಣತಮ್ಮಂದಿರು/ದಾಯಾದಿಗಳು. ಬಂಧುಬಾಂಧವರು, ನೆಂಟರಿಷ್ಟರು. ಇದೇನು ಕಾಡಾಡಿ ಯುದ್ಧವಲ್ಲ, ಮಹಾಯುದ್ಧ. ಇದರಲ್ಲಿ ಎರಡೂ ಕಡೆಯೂ ವಿನಾಶ ಕಾದಿದೆ. ಗೆಲ್ಲುವವರು ಯಾರೇ ಆದರೂ ಉಳಿಯುವವರು ಬೆರಳೆಣಿಕೆ ಮಾತ್ರ. ಸಾಯುವವರು ಕೇವಲ ಶತ್ರುಗಳಲ್ಲ, ಅಲ್ಲದೇ ಶತ್ರುಗಳೂ ಬಾಂಧವರೇ! ಸ್ವಜನ ನಾಶ, ಕುಲಕ್ಷಯ, ಇದು ಇಲ್ಲಿಯ ಅಳಲು. ಸತ್ತವರ ಸಮಾದಿಯೇ ಗೆದ್ದವನ ಸಿಂಹಾಸನ. ಇಂಥ ಸರ್ವನಾಶದಿಂದ ಬರುವ ಸ್ಮಶಾನ ಸದೃಶ ರಾಜ್ಯ ಬೇಕೇ? ಅದಕ್ಕಾಗಿ ಯುದ್ಧ ಬೇಕೇ?

ಮುಂದುವರೆಯುವ ಮೊದಲು ಅದೇಕೋ ರನ್ನನ ದುರ್ಯೋಧನ ನೆನಪಿಗೆ ಬರುತ್ತಾನೆ. ರಾಜ್ಯ ಬೇಡವೆಂದರೂ ಯುದ್ಧ ಬೇಕೇಬೇಕೆನ್ನುತ್ತಾನೆ ಭೂಪ. ಹೆಜ್ಜೆ ಇಟ್ಟದ್ದಾಗಿದೆ, ಹಿಂದೆಗೆಯುವಂತಿಲ್ಲ. ಭೀಷ್ಮ ಶರಶಯ್ಯೆಯ ಮೇಲೆ ಮಲಗಿದ್ದಾನೆ. ಅಸಂಖ್ಯ ಬಾಣಗಳ ವೇದನೆಯ ನಡುವೆಯೂ ಅತ್ತ ಯುದ್ಧಭೂಮಿಯಲ್ಲಿ ಕೌರವನ ಗತಿಯೇನಾಯಿತೋ ಎನ್ನುವ ಕಕ್ಕುಲಾತಿ ವೃದ್ಧಪಿತಾಮಹನಿಗೆ. ಅವನನ್ನು ನೋಡಲು ಬಂದ ಕುರುರಾಯ ತನ್ನ ಛಲದಿಂದ ತಾತನಿಗಾದ ದುರ್ಗತಿಯನ್ನು ಕಂಡು ಕಂಬನಿ ಮಿಡಿಯುತ್ತಿರಲು "ಈಗಲಾದರೂ" ಸಂಧಿ ಮಾಡಿಕೊಂಡು ಪಾಂಡವರೊಡನೆ ರಾಜ್ಯ ಹಂಚಿಕೋ ಎಂದು ಸಲಹೆ ನೀಡುತ್ತಾನೆ ಭೀಷ್ಮ. ಅದಕ್ಕೆ ದುರ್ಯೋಧನನ ಉತ್ತರ ನೋಡಿ. "ನೆಲಕಿರಿವೆನೆಂದು ಬಗೆವಿರೇ ಛಲಕಿರಿವೆಂ... ಪಾಂಡುಸುತರೊಳೀನೆಲನಿದು ಪಾಳ್ನೆಲನೆನಗೆ" ಅವನಿಗೆ ಯುದ್ಧ ಬೇಕು, ಆದರೆ ರಾಜ್ಯಕ್ಕಾಗಿಯಲ್ಲ, ಛಲಕ್ಕಾಗಿ. "ಖಂಡಿತಮೆನಿಪ್ಪ ವರಮಹಿಮಂಡಲ ಧವಳಾತಪತ್ರಸಂಪದಮೆನಗೇ ಭಂಡಂ, ಅಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ" ಎನ್ನುವ ದುರ್ಯೋಧನನಿಗೆ ಯುದ್ಧ ಅನಿವಾರ್ಯ, ಇನ್ನೇತಕ್ಕಲ್ಲದಿದ್ದರೂ ಈ ಗಳಿಗೆಯಲ್ಲಿ ಸಂಧಿಯ ಮಾತಾಡಿದರೆ ಭೀಮನ ಮುಂದೆ ತಾನು ಅದೆಷ್ಟು ಕುಗ್ಗಿಹೋದಾನು? "ಬಾಡಮನೈದನವರ್ ಮುಂಬೇಡಿದೊಡಾನಿತ್ತೆನಿಲ್ಲ, ರಾಜ್ಯಾರ್ಧಮನಾಂ ಬೇಡಿಯವರಲ್ಲಿಗಟ್ಟಿದೊಡೆ ಏಡಿಸಿ ರೋಡಿಸನೇ ಪವನ ನಂದನನೆನ್ನಂ?" ಅಲ್ಲದೆ, ಸಂಧಿಗೈದು ರಾಜ್ಯವನ್ನು ಉಳಿಸಿಕೊಂಡು ಮಾಡುವುದಾದರೂ ಏನಿದೆ? ಹುಟ್ಟಿದ ನೂರು, ಒಡಹುಟ್ಟಿದ ನೂರು ಮಂದಿ ಆಗಲೇ ಯುದ್ಧದಲ್ಲಿ ಸತ್ತಿದ್ದಾರೆ, ಜೀವದ ಗೆಳೆಯ ಕರ್ಣನಿಲ್ಲ, ಪ್ರೀತಿಯ ತಮ್ಮ ದುಶ್ಶಾಸನನಿಲ್ಲ, ಗುರುವಿಲ್ಲ ಬಂಧುಮಿತ್ರರನ್ನೆಲ್ಲ ಕಳೆದುಕೊಂಡು ರಾಜ್ಯಮಾಡುವುದಾದರೂ ಏನು? ಅದಕ್ಕಾಗಿ ಮಾನಬಿಟ್ಟು ಸಂಧಿಮಾಡಿಕೊಳ್ಳುವುದೇ? "ಪುದುವಾಳಲ್ಕಣಮಾಗದೆಂದುಮವರೊಳ್ ಸಂಧಾನಮಂ ಮಾಡಲಾಗದು ನೀಮಿಲ್ಲದೆಯಜ್ಜ ಬಿಲ್ಲ ಗುರುಗಳ್ ತಾಮಿಲ್ಲದೇ ಕರ್ಣನಿಲ್ಲದೆ ದುಶ್ಶಾಸನನಿಲ್ಲದಾರೊಡನೆ ರಾಜ್ಯಂಗೈವೆನ್... ಆರ್ಗೆ ತೋರಿ ಮೆರೆವೆನ್ ನಾನಾವಿನೋದಂಗಳಂ" ಆದ್ದರಿಂದ ಸಂಧಿಯಿಂದ ಬರುವ ರಾಜ್ಯ ಬೇಡವೆನ್ನುವ ದುರ್ಯೋಧನನಿಗೆ ಯುದ್ಧದಲ್ಲಿ ತಾವು ಸೋಲುವುದು ಖಚಿತವೆಂಬ ಅರಿವಿದೆ. ಆದರೇನಂತೆ? ಗೆದ್ದೇನು ಮಾಡಬೇಕು ಇದು ಅವನ ನಿಲುವು.

ಇರಲಿ, ಇನ್ನು ಮಹಾಭಾರತಕ್ಕೆ ಮರಳಿದರೆ, ಇದೋ ನೋಡಿ, ಅದೇ ಸಂಕಟ ಅರ್ಜುನನದು.

ಎರಡೂ ಕಡೆಯ ವೀರರೂ ತಂತಮ್ಮ ಶಂಖವೂದಿದ್ದಾರೆ, ರಣಭೇರಿ ಬಾರಿಸಿದ್ದಾರೆ. ಯುದ್ಧಾರಂಭಕ್ಕೆ ಸನ್ನೆ ದೊರೆತಾಗಿದೆ. ತಮ್ಮ ರಣಭೇರಿಯನ್ನು ಕೇಳೇ ಎದೆಯೊಡೆದಂತಿದ್ದ ಕೌರವರನ್ನು ನೋಡುತ್ತಾ ಶಸ್ತ್ರಸನ್ನದ್ಧನಾದ ಪಾರ್ಥ ಕೃಷ್ಣನನ್ನು ಕೇಳುತ್ತಾನೆ; "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಕೇಶವ" - ಇವತ್ತು ನನ್ನೊಡನೆ ಯುದ್ಧಮಾಡಲು ನೆರೆದಿರುವ ವೀರರನ್ನು ನೋಡೋಣ; ದುರ್ಬುದ್ಧಿಯಾದ ಕೌರವನಿಗೆ ಯುದ್ಧದಲ್ಲಿ ಪ್ರಿಯವನ್ನುಂಟುಮಾಡಲು ಯಾರುಯಾರು ನೆರೆದಿದ್ದಾರೆ ನೋಡೋಣ, ರಥವನ್ನು ತೆಗೆದುಕೊಂಡು ಹೋಗಿ ಎರಡೂ ಸೈನ್ಯಗಳ ಮಧ್ಯೆ ನಿಲ್ಲಿಸು.

ಸರಿ, ರಥವನ್ನು ಕೊಂಡೊಯ್ದು ಉಭಯಸೈನ್ಯದ ಮಧ್ಯೆ ನಿಲ್ಲಿಸುತ್ತಾನೆ ಪಾರ್ಥಸಾರಥಿ. "ದುರ್ಬುದ್ಧಿಯಾದ ಕೌರವನಿಗೆ ಯುದ್ಧದಲ್ಲಿ ಪ್ರಿಯವನ್ನುಂಟುಮಾಡಲು ಯಾರುಯಾರು ನೆರೆದಿದ್ದಾರೆ ನೋಡೋಣ" ಎಂದು ವ್ಯಂಗ್ಯವಾಡಿಕೊಂಡು ಬಂದ ಅರ್ಜುನನಿಗೆ ಅಲ್ಲಿ ಕಂಡದ್ದೇನು? ಭೀಷ್ಮ-ದ್ರೋಣರೇ ಮೊದಲಾಗಿ ಅಲ್ಲಿ ನೆರೆದಿದ್ದ ತನ್ನದೇ ಜನಸಮೂಹ - ತಂದೆಯರು, ತಾತಂದಿರು, ಆಚಾರ್ಯರು, ಸೋದರ ಮಾವಂದಿರು, ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಮಾವಂದಿರು ಹೀಗೆ ಎರಡೂ ಕಡೆ ತುಂಬಿದ್ದ ತನ್ನದೇ ಬಂಧುಬಾಂಧವರನ್ನು ನೋಡಿ ಪಾರ್ಥನ ಮನಸ್ಸು ಕರುಣೆಯಿಂದ ಮರಗಟ್ಟಿಹೋಗುತ್ತದೆ. ಮತಿ ಮಾರುತ್ತದೆ. ಮಾತು ಬಡಬಡಿಕೆಯಾಗುತ್ತದೆ. ಕೃಷ್ಣನಿಗೆ ಅನ್ನುತ್ತಾನೆ - "ಇಲ್ಲಿ ಯುದ್ಧೋತ್ಸಾಹಿಗಳಾಗಿ ನೆರೆದಿರುವ ನನ್ನದೇ ಬಂಧುವರ್ಗವನ್ನು ನೋಡಿ ನನ್ನ ಕೈಕಾಲುಗಳು ಕುಂದುತ್ತಿವೆ, ಕೃಷ್ಣಾ, ಬಾಯೊಣಗುತ್ತಿದೆ, ಮೈನಡುಗುತ್ತಿದೆ, ನವಿರೇಳುತ್ತಿದೆ, ಹಿಡಿದ ಬಿಲ್ಲು ಕೈಜಾರುತ್ತಿದೆ, ಮೈಬಿಸಿಯೇರಿ ಕುಸಿಯುವಂತಾಗುತ್ತಿದೆ, ಭ್ರಮೆ ಹಿಡಿದ ಬುದ್ಧಿಗೆ ಬರೀ ಅಪಶಕುನಗಳೇ ಕಾಣುತ್ತಿವೆ..."

ಇಡೀ ಯುದ್ಧದ ಸನ್ನಿವೇಶದಲ್ಲಿ ಈ ಸಂದರ್ಭ ಎಷ್ಟು ಔಚಿತ್ಯ ಪೂರ್ಣವಾಗಿ ಬಂದಿದೆ ಹಾಗೂ ಅದೆಷ್ಟು ನಾಟಕೀಯವಾಗಿ ಚಿತ್ರಿತವಾಗಿದೆ ನೋಡಿ. ಮೊದಲೇ ಹೇಳಿದಂತೆ, ಮುಂಬರುವ ಗೀತೆಯ ಬೆಳಕಿಗೆ ಬಹು ಔಚಿತ್ಯಪೂರ್ಣ ಹಿನ್ನೆಲೆ ವಿಷಾದ. ಇಡೀ ಭಾರತದ ಕತೆಯಲ್ಲಿ ಪಡಿನೆಳಲಾಗೇ ಬರುವ ವಿಷಾದ ಅಂದು ಅರ್ಜುನನಲ್ಲಿ ಹರಳುಗಟ್ಟುತ್ತದೆ. ಯುದ್ಧಸನ್ನದ್ಧವಾದ ಮಹಾಸೇನೆಯ ಮುಂದೆ ನಡೆಯುವ ಈ high drama ಮುಂಬರುವ ಗೀತಾಪ್ರವಚನಕ್ಕೆ ಅತ್ಯುತ್ತಮ curtain-raiser ಆಗಿ ಕೆಲಸ ಮಾಡುತ್ತದೆ. ಹಾಗೆ ನೋಡಿದರೆ, ಈ high drama ಇಲ್ಲದಿದ್ದರೆ ಅಷ್ಟುದ್ದದ ಗೀತೆಯ ಉಪದೇಶವೇ ಅಪ್ರಸ್ತುತವಾಗಿಬಿಡುತ್ತದೆ. ಸಾಮಾನ್ಯ ಯುದ್ಧದ ಸಂದರ್ಭವನ್ನು ಮೇಲೆತ್ತಿ ಗೀತಾಪ್ರಸ್ಥಾನಕ್ಕೊಂದು ವೇದಿಕೆ ಕಲ್ಪಿಸುತ್ತದೆ ಅರ್ಜುನನ ಈ ತಳಮಳ. ಇದು ಈ ಪ್ರಸಂಗದ ತಾಂತ್ರಿಕ ಔಚಿತ್ಯ. ಇನ್ನು ಕತೆಯ ನಡೆಯಲ್ಲಿ ಇದಕ್ಕೊಂದು ಔಚಿತ್ಯವಿದೆಯೇ? ಪಾಂಡವರಿಗೆ ಈ ಯುದ್ಧ ಯಥಾಸಹಜವಾದ ಆಯ್ಕೆಯಾಗಿರುವಾಗ, ಅದರಲ್ಲೂ ಕೌರವನೇ ಸಂಧಿಯನ್ನು ನಿರಾಕರಿಸಿರುವಾಗ, ಅದೂ ತಿಂಗಳುಗಟ್ಟಳೆ ಪಾಂಡವರೂ ಸಮರ ಸನ್ನಾಹ ನಡೆಸಿಯೇ ಇಂದು ಇಲ್ಲಿ ಬಂದು ನಿಂತಿರುವಾಗ ತಳಮಳಕ್ಕೆ, ಗೀತೋಪದೇಶಕ್ಕೆ ಎಡೆಯೆಲ್ಲಿ? ಮುಂದೆ ನಡೆಯಬೇಕಾದ್ದೇ ಯುದ್ಧ, ಶತ್ರುನಾಶ, ಜಯ. ತತ್ತ್ವಜಿಜ್ಞಾಸೆ ಮಾಡುವ ಸ್ಥಳವೇ ಯುದ್ಧಭೂಮಿ? ತುಂಬಿದ ಸೈನ್ಯದ ಮುಂದೆ ನಿಂತು ಅರಿಭಯಂಕರನಾದ ಅರ್ಜುನ ತನ್ನ ಮೈನಡುಗುತ್ತಿದೆ, ಕೈಕಾಲು ಕುಸಿಯುತ್ತಿದೆ ಎನ್ನುವುದೆಂದರೇನು, ಅವನಿಗೆ ಕೃಷ್ಣ ತಾಸುಗಟ್ಟಲೆ ಉಪದೇಶ ಮಾಡುತ್ತಾ ನಿಲ್ಲುವುದೇನು? ಉತ್ತರಕುಮಾರನಾದರೆ ಅದು ಬೇರೆ, ಆದರೆ ಅರ್ಜುನನ ವಿಷಯದಲ್ಲಿ ಅದು ಅಸಹಜವಲ್ಲವೇ? ಅದು ಕತೆಯ ಓಟಕ್ಕೆ ಧಕ್ಕೆಯಲ್ಲವೇ?

ಇರಬಹುದೇನೋ, ಆದರೆ ಇಲ್ಲಿ ಗಮನಿಸಬೇಕಾದ್ದೆಂದರೆ ಅರ್ಜುನನ ಹಿಂಜರಿಕೆ ಭಯಜನ್ಯವಲ್ಲ, ತುಮುಲಜನ್ಯ. ಬಹುಶಃ ಭೀಮಕರ್ಮನಾದ ವೃಕೋದರನಿಗಾದರೆ ಅದರ ಅಗತ್ಯವೇ ಬರುತ್ತಿರಲಿಲ್ಲವೇನೋ (ಅವನ ಮನದಲ್ಲಿ ತುಮುಲಕ್ಕೆ ಎಡೆಯಿದ್ದುದೇ ಕಾಣೆ), ಇನ್ನು ಧರ್ಮಾಭ್ಯಾಸಜಡನಾದ ಯುಧಿಷ್ಠಿರನ ಮಾತಂತೂ ಕೇಳುವುದೇ ಬೇಡ. ಆದರೆ ಅರ್ಜುನನ ವಿಷಯ ಹಾಗಲ್ಲ. ಅವನಿಗೆ ಧರ್ಮನ ಧರ್ಮಖಚಿತತೆಯಾಗಲೀ ಭೀಮನ ಮನೋದಾರ್ಢ್ಯವಾಗಲೀ ಇಲ್ಲ. ಮಹಾವೀರ, ಬಹುಕಾರ್ಯಸಮರ್ಥ, ಆದರೂ ಮಾನವಸಹಜ ದೌರ್ಬಲ್ಯಕ್ಕೆ ಹೊರತಲ್ಲ. ಅದೆಂದೂ ಇಲ್ಲದ ತಳಮಳ ಪಕ್ಕನೆ ಅವನನ್ನು ಹಿಡಿದುಬಿಡುವುದು. ಮನುಷ್ಯನ ಮನದಲ್ಲಿ ನಡೆಯುವ ನಿರಂತರ ತಾಕಲಾಟದ ಪ್ರತಿನಿಧಿ ಅರ್ಜುನ. ಅದಕ್ಕೇ ಕೃಷ್ಣ ಗೀತೆಯನ್ನು ಹೇಳಬೇಕಾಗಿಬಂದದ್ದು ಅರ್ಜುನನಿಗೆ. ಭಾರತದುದ್ದಕ್ಕೂ ವ್ಯಾಸರದೊಂದು ವಿಶಿಷ್ಟ ತಂತ್ರಗಾರಿಕೆಯನ್ನು ಕಾಣುತ್ತೇವೆ. ಯಾವ ಪಾತ್ರ ಯಾವಾಗ ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತದೆ. ಅದರಿಂದ ಆಗುವ ಪರಿಣಾಮವೇ ಕತೆಯನ್ನು ಬೆಳೆಸಿಕೊಂಡುಹೋಗುತ್ತದೆ. ಅದರಮೂಲಕ ಮಹತ್ತಾದ್ದನ್ನೇನೋ ಹೇಳುತ್ತಾರೆ ವ್ಯಾಸರು. ಸತ್ಯವತಿಯ ಮೋಹಕ್ಕೆ ಬಿದ್ದು ಶಂತನು ಮಗನ ತ್ಯಾಗವನ್ನು ಅಪೇಕ್ಷಿಸಬಾರದಿತ್ತು, ವಂಶವೇ ನಿಂತುಹೋದಾಗಲೂ ಭೀಷ್ಮ ತನ್ನ ಪ್ರತಿಜ್ಞೆಗೇ ಕಟ್ಟುಬಿದ್ದು ತನ್ನ ಹೊಣೆಯನ್ನು ಉಪೇಕ್ಷಿಸಬಾರದಿತ್ತು ಎಂಬುದರಿಂದ ಹಿಡಿದು, ಉದ್ದಕ್ಕೂ... ಅವಿವಾಹಿತಳಾದ ಕುಂತಿ ಆ ಸೂರ್ಯಮಂತ್ರವನ್ನು ಪರೀಕ್ಷಿಸಬಾರದಿತ್ತು, ಕರ್ಣ ತಾಯಿಗೆ ಮಾತುಕೊಡಬಾರದಿತ್ತು, ದಾಸೀಪುತ್ರನಾದ ವಿದುರ ಜ್ಞಾನಿಯಾಗಿರಬಾರದಿತ್ತು, ಮಹಾಜ್ಞಾನಿಯಾದ ಧರ್ಮಜ ಜೂಜಾಡಬಾರದಿತ್ತು, ಧರ್ಮಜ್ಞರಾದ ಭೀಷ್ಮ-ದ್ರೋಣರು ಅಧರ್ಮಿಗಳಾದ ಕೌರವರ ಪಕ್ಷವಹಿಸಬಾರದಾಗಿತ್ತು... ಹೀಗೇ ಪಟ್ಟಿ ಬೆಳೆಯುತ್ತದೆ. ಅದರೊಡನೆ ಅದರ ಕೆಡುಕೂ, ಕತೆಯೂ. ಅದಾಗದಿದ್ದರೆ ಕತೆಯ ದಿಕ್ಕೇ ತಪ್ಪುತ್ತದೆ, ಕತೆಯೇ ನಿಲ್ಲುತ್ತದೆ. ಇಡೀ ಭಾರತ ಕತೆಯೇ ಒಂದು ಪ್ರಯೋಗಾಲಯದಂತೆಯೂ, ವ್ಯಾಸರು ಪರಸ್ಪರ ವಿರುದ್ಧ ಪದಾರ್ಥಗಳನ್ನು ಪ್ರಣಾಳದಲ್ಲಿ ಕಲೆಸಿ ಅದರ ಪರಿಣಾಮಗಳನ್ನು ಈಕ್ಷಿಸುವ ವಿಜ್ಞಾನಿಯಂತೆಯೂ ಕಾಣುತ್ತಾರೆ. ಇದರದೇ ಮುಂದುವರಿಕೆ, ತತ್ತ್ವಜಿಜ್ಞಾಸೆ ಮಾಡಬಾರದ ಯುದ್ಧಭೂಮಿಯಲ್ಲಿ ಅರ್ಜುನ ತತ್ತ್ವಜಿಜ್ಞಾಸೆಗೆ ಬಿದ್ದುದು. ಹಾಗೆಂದು ಅದೇನು ಯುದ್ಧ ಮಾಡಲಾರದ ಅಂಜಿಕೆಯಿಂದ ಬಂದದ್ದಲ್ಲ. ರಣಭೂಮಿಯಲ್ಲಿ ಹೀಗೆ ಕೈಕಾಲು ಕುಸಿದು ಕುಳಿತವನು ಉತ್ತರಕುಮಾರನಲ್ಲ, ಅರಿಭಯಂಕರನಾದ ಅರ್ಜುನ. ಅರಿಭಯಂಕರನಾದರೂ, ಅನೇಕ ಯುದ್ಧಗಳನ್ನು ಕಂಡಿದ್ದರೂ ಅರ್ಜುನನಿಗೆ ಈ ಮಹಾಯುದ್ಧ ಹೊಸದೇ, ವಿಶಿಷ್ಟವೇ. ಯುದ್ಧದಲ್ಲಿ ಸ್ವಜನರನ್ನು ಎದುರಿಸಬೇಕಾಗುತ್ತದೆ, ಕೊನೆಗೆ ಗುರುವನ್ನೂ ತಾತನನ್ನೂ ಹೊಡೆಯಬೇಕಾಗುತ್ತದೆಯೆಂಬ ಸತ್ಯ ಅರ್ಜುನನಿಗೆ ತಿಳಿಯದ್ದೇನಲ್ಲ. ಆದರೆ ಅದೆಂದೂ ಅವನ ಮನಸ್ಸಿನಾಳಕ್ಕೆ ಇಳಿದದ್ದಿಲ್ಲ; ಕಟು ವಾಸ್ತವವಾಗಿ ಎದೆ ತಟ್ಟಿದ್ದಿಲ್ಲ. ಇದುವರೆಗೂ ಯುದ್ಧದ ಮಾತುಗಳು, ತಲೆ ಚೆಂಡಾಡುವ, ತೊಡೆ ಮುರಿಯುವ, ಎದೆ ಬಗೆಯುವ ಘೋರ ಪ್ರತಿಜ್ಞೆಗಳು ಕೇವಲ ಮಾತಿನ ಮಟ್ಟದಲ್ಲಿದ್ದುವೇ ಹೊರತು, ಕೃತಿಯ ಮಟ್ಟದಲ್ಲಿ, ಕುಲಕ್ಷಯದ ಘೋರ ದುರಂತದ ರೂಪದಲ್ಲಿ ಅರ್ಜುನನ ಮನಸ್ಸಿನಲ್ಲಿ ಮೂಡಿದ್ದೇ ಇಲ್ಲ. "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಕೇಶವ" ಎಂದು ಕೇಳಿ ರಥವನ್ನು ಅಲ್ಲಿ ತೆಗೆದುಕೊಂಡು ಹೋಗುವ ಕ್ಷಣ ಇದೆಯಲ್ಲ, ಅದು ಮಾತು-ಕೃತಿಗಳ ಮುಖಾಮುಖಿ, ಕಂಡರಿಯದ, ಕಲ್ಪಿಸಿರದ ದುರಂತ ಧುತ್ತನೆ ಇದಿರಾದಾಗ ಸಹಜವಾಗಿ ಉಂಟಾಗುವ ವಿಪ್ಲವ, ಅತ್ಯಂತ ಸಹಜವಾದ ಈ ತುಮುಲವನ್ನು, ಅರ್ಜುನ ಅದೆಷ್ಟು ಸೊಗಸಾಗಿ ತರ್ಕಬದ್ಧವಾಗಿ ಮಂಡಿಸುತ್ತಾನೋ ನೋಡಿ. ಸ್ವಾರಸ್ಯಕರವಾದ ಈ ಭಾಗವನ್ನು ಹಾಗೆಯೇ ಭಾವಾನುವಾದ ಮಾಡಿ ಹಾಕುತ್ತೇನೆ:

"ಯುದ್ಧದಲ್ಲಿ ಸ್ವಜನರನ್ನು ಕೊಲ್ಲುವುದು ನನಗಂತೂ ಶ್ರೇಯಸ್ಕರವೆನ್ನಿಸುವುದಿಲ್ಲ. ಕೃಷ್ಣಾ, ನನಗೆ ಈ ವಿಜಯವೂ ಬೇಡ, ರಾಜ್ಯಸುಖಭೋಗಗಳೂ ಬೇಡ; ಯಾರ ಸುಖಕ್ಕೋಸ್ಕರ ಈ ಭೋಗ ಐಶ್ವರ್ಯವನ್ನೆಲ್ಲಾ ಸಂಪಾದಿಸಬಯಸುತ್ತೇವೋ ಅದೇ ತಂದೆ, ಮಕ್ಕಳು, ಬಂಧು-ಬಳಗವನ್ನು ಕೊಂದು ಪಡೆಯುವ ಈ ರಾಜ್ಯದಿಂದ ಪ್ರಯೋಜನವಾದರೂ ಏನು. ಯಾವ ಪ್ರೀತಿಗೋಸ್ಕರ ಕೌರವರನ್ನು ಕೊಲ್ಲಬೇಕು ನಾನು? ಈ ಭೂಮಿಯಲ್ಲ, ಮೂರುಲೋಕದ ಒಡೆತನ ದಕ್ಕೀತೆಂದರೂ ನಾನಂತೂ ಕೌರವರನ್ನು ಕೊಲ್ಲಲಾರೆ. ಮತ್ತೂ ನಮ್ಮವರನ್ನು ಕೊಲ್ಲುವುದರಿಂದ ಪಾಪವೇ ಬಂದೀತಲ್ಲದೇ ಸಂತಸವೇನಾದರೂ ದಕ್ಕೀತೇ? ಅವರೇನೋ ದುರಾಶೆಯವರು, ತಾವು ಮಾಡುತ್ತಿರುವ ಅನಾಹುತವನ್ನು ಕಾಣದೇ ನಮ್ಮ ಮೇಲೆ ಯುದ್ಧಕ್ಕೆ ನಿಂತಿದ್ದಾರೆ, ಆದರೆ ನಾವು, ಮುಂದಾಗಲಿರುವ ಘೋರ ವಿಪತ್ತನ್ನು ಕಂಡೂ ಅವರಂತೆಯೇ ಕುಲಕ್ಷಯದ ಕಾರ್ಯಕ್ಕೆ ಕೈಹಾಕಬೇಕೇ?

"ಕುಲಕ್ಷಯದಿಂದ ಸನಾತನ ಕುಲಧರ್ಮ ನಷ್ಟವಾಗುವುದು; ಧರ್ಮನಷ್ಟವಾಗುವುದರಿಂದ ಅಧರ್ಮವೇ ಎಲ್ಲೆಲ್ಲೂ ನೆಲೆಗೊಳ್ಳುವುದು. ಅಧರ್ಮವು ತುಂಬಿದಾಗ ಕುಲಸ್ತ್ರೀಯರು ಕೆಡುವರು, ಗೋಪಾಲಾ, ಹೀಗೆ ಕುಲಸ್ತ್ರೀಯರು ಕೆಟ್ಟಾಗ ವರ್ಣಸಂಕರವಾಗುವುದು, ಕುಲಕ್ಕೆ ಕುಲವೇ ನಾಶವಾಗುವುದು, ಪಿತೃಗಳು ಪಿಂಡೋದಕಗಳಿಲ್ಲದೇ ನರಕಕ್ಕೆ ಬೀಳುವರು; ಈ ಸಂಕರದೋಷದಿಂದ ಹುಟ್ಟಿದ ವ್ಯಕ್ತಿ ಕುಲಧರ್ಮ ಜಾತಿಧರ್ಮಗಳಿಂದ ಶಾಶ್ವತವಾಗಿ ಬಾಹಿರನಾಗುವನು; ಹೀಗೆ ಧರ್ಮಭ್ರಷ್ಟನಾದ ಮನುಷ್ಯ ಶಾಶ್ವತವಾಗಿ ನರಕದಲ್ಲಿ ನೆಲೆಸುವನು.

"ಅಹಾ! ಕೇವಲ ರಾಜ್ಯಸುಖದ ಆಶೆಗೆ ಸಿಕ್ಕಿ ನಮ್ಮ ಬಂಧುಗಳನ್ನೇ ಕೊಲ್ಲುವ ಮಹಾಪಾಪವನ್ನೆಸಗಲು ಹೊರಟಿದ್ದೇವಲ್ಲ! ಇದಕ್ಕಿಂತಾ ರಣಭೂಮಿಯಲ್ಲಿ ನಿರಾಯುಧನಾಗಿ, ಪ್ರತೀಕಾರವಿಲ್ಲದೇ ಕುಳಿತ ನನ್ನನ್ನು ಕೌರವರು ಕೊಂದು ಕಳೆಯುವುದೇ ಎಷ್ಟೋ ಲೇಸು"

ಇಷ್ಟು ಹೇಳಿದ ಅರ್ಜುನ ತನ್ನ ಬಿಲ್ಲು ಬಾಣಗಳನ್ನು ಬಿಸುಟು ದುಃಖಭರಿತನಾಗಿ ರಥದಲ್ಲಿ ಕುಳಿತುಬಿಡುತ್ತಾನೆ

ಮುಂದೇನು???

11 comments:

ಬಾಲು said...

ಮೊದಲು ಬರವಣಿಗೆಗೆ ದನ್ಯವಾದಗಳು.

ನೀವು ಹೇಳಿದ ಹಾಗೆ ನನಗೆ ಕೌರವನ ಕೊನೆಯ ಮಾತುಗಳು ಬಹಳ ಇಷ್ಟ. ಯುದ್ದ ದಲ್ಲಿ ಎಲ್ಲರನ್ನು ಕಳೆದು ಕೊಂದ ಅವನು, ತಾನು ಅಲ್ಲಿಯೇ ಸಾವನ್ನು ಕಾಣಬೇಕಿದೆ, ಸಂದಾನ ಮಾಡಿಕೊಂಡು ಪ್ರಯೋಜನವೇನು? ಪ್ರಿಯರನ್ನು ಕಳೆದುಕೊಂಡು ರಾಜ್ಯ ಇಟ್ಟುಕೊಂಡು ಮಾಡುವುದೇನಿದೆ?. ಎಷ್ಟು ಸತ್ಯ ಅಲ್ಲವ?

ಗೀತೋಪದೇಶ ಮಾಡಿದ ಕೃಷ್ಣ ಬಹಳ ಕಿಲಾಡಿ, ಅರ್ಜುನನಿಗೆ ಬಾಣ ಹೂಡು ಎಂದು ಅದಕ್ಕೆ ಸಕಾರಣ ಗಳನ್ನು ಕೊಡುತ್ತಾನೆ. ನಮ್ಮ ಭಾಷೆಯಲ್ಲಿ ಹೇಳಬೇಕು ಎಂದರೆ ಒಳ್ಳೆಯ councelling ಮಾಡುತ್ತಾನೆ. :) :)

ಆದರೆ ನನಗೆ ಒಂದು ಸಂದೇಹವಿದೆ. ಭೈರಪ್ಪ ನವರ ಪರ್ವ ದಲ್ಲಿ ದ್ರೌಪದಿ ವಸ್ತ್ರಾಪ ಹಾರ ಪ್ರಕರಣ ಇಲ್ಲ. ಅದು ವ್ಯಾಸ ವಿರಚಿತ ಭಾರತದಲ್ಲಿ ಇದೆಯೇ? ವ್ಯಾಸ ಭಾರತವನ್ನು ನಾನು ಓದಿಲ್ಲವಾದ್ದರಿಂದ ನಂಗೆ ಗೊತ್ತಿಲ್ಲ.

Manjunatha Kollegala said...

ಬಾಲು,

ಪ್ರತಿಕ್ರಿಯೆಗೆ ಧನ್ಯವಾದಗಳು. ದ್ರೌಪದೀವಸ್ತ್ರಾಪಹರಣ ಖಂಡಿತಾ ಮಹಾಭಾರತದ ಕತೆಯೇ. In fact, ಅದೇ ಇಡೀ ಭಾರತದ ದುರಂತದ precipitation point ಅನ್ನಬಹುದು.

ಭೈರಪ್ಪನವರ ಪರ್ವ ಆಗಲೀ ರನ್ನನ ಗದಾಯುದ್ಧವಾಗಲೀ ಭಾರತದ ಪುನಃಸೃಷ್ಟಿಯಲ್ಲ, ಅದರದೇ ಆದ agenda ಇಟ್ಟುಕೊಂಡು ಬರೆದ ಕೃತಿಗಳು. ತಮ್ಮ ಮೂಲ ಕಥಾಹಂದರಕ್ಕೆ (ಅಥವಾ ಕೇವಲ ಕತೆಯ ಬುನಾದಿಗಷ್ಟೇ) ಭಾರತವನ್ನಾಧರಿಸಿವೆಯೇ ಹೊರತು ಕತೆಯ ಬೆಳವಣಿಗೆ, ನಿರೂಪಣೆ, ಪಾತ್ರ ಸೃಷ್ಟಿ ಪೋಷಣೆಯ ದೃಷ್ಟಿಯಲ್ಲಿ ಅವಷ್ಟಕ್ಕೇ ಅವು ಸ್ವತಂತ್ರ ಕೃತಿಗಳು. ಆದ್ದರಿಂದ ಕತೆಯ authenticityಯ ದೃಷ್ಟಿಯಿಂದ ಅವುಗಳನ್ನು ಮೂಲ ಮಹಾಭಾರತಕ್ಕೆ ಹೋಲಿಸುವುದು ಸಾಧುವಲ್ಲ. ಪರ್ವವಾಗಲೀ ಗದಾಯುದ್ಧವಾಗಲಿ ಮಹಾಭಾರತವಲ್ಲ. ಭೈರಪ್ಪನವರ ಕೃಷ್ಣ ಮಹಾಭಾರತದ ಕೃಷ್ಣನಲ್ಲ; ರನ್ನನ ದುರ್ಯೋಧನ ಮಹಾಭಾರತದ ದುರ್ಯೋಧನ ಖಂಡಿತ ಅಲ್ಲ.

ಪ್ರಾಸಂಗಿಕವಾಗಿ ಅರ್ಜುನನ ತುಮುಲವನ್ನು ಚಿತ್ರಿಸುವಾಗ ಅಂಥದ್ದೇ ತುಮುಲ ರನ್ನನ ದುರ್ಯೋಧನನಲ್ಲಿ ಕಂಡಿದ್ದು ನೆನಪಿಗೆ ಬಂತಷ್ಟೇ, ಆದರೆ ಅದು ಭಾರತದ ದುರ್ಯೋಧನನ ಚಿತ್ರಣವಲ್ಲ.

ಅರ್ಜುನ ಬಾಣ ಹೊಡೆಯುವಂತೆ ಮಾಡಲು ನೂರೆಂಟು ಕಾರಣ ಕೊಡುವ ಕೃಷ್ಣನ "ಕಿಲಾಡಿ"ತನ ಇಡೀ ಕೃಷ್ಣತ್ವದ ಒಂದು ಪದರವಷ್ಟೇ. ಆದರೆ ಅದರ ಉಳಿದ ಪದರಗಳನ್ನು ಒಂದೊಂದೇ ಬಿಡಿಸುತ್ತಾ ಹೋದಂತೆ ಗೀತೋಪದೇಶದ ತಾತ್ತ್ವಿಕ, ರಾಜನೈತಿಕ, ಅಧ್ಯಾತ್ಮಿಕ ಆಯಾಮಗಳು ಕಣ್ಣಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದೇ ವಿಶ್ವರೂಪದರ್ಶನ. ಮುಂದೆ ಓದಲು, ಬರೆಯಲು ನಾನೂ ಸಾಕಷ್ಟು ಉತ್ಸುಕನಾಗಿದ್ದೇನೆ.

ನಿಮ್ಮ ಪ್ರೋತ್ಸಾಹಕ್ಕೆ ನನ್ನಿ.

Manjunatha Kollegala said...

ಲೇಖನದ ಬಗ್ಗೆ ಮಿತ್ರ ವಿವೇಕರ ಮಾತು:
========================

ಪ್ರಿಯ ಮಂಜು,

ಬಹಳ ಸೊಗಸಾದ ಮತ್ತು ಅತ್ಯಂತ ಹೃದ್ಯವಾದ ಲೇಖನವಿದು. ಭಗವಾನ್‌ವ್ಯಾಸರ ದರ್ಶನವನ್ನು ನಿಮ್ಮ ಲೇಖನ ಬಿಡಿಸಿ ತೋರಿಸುತ್ತಿದೆ. ಈ ಕುರಿತು ನನ್ನ ವಿಚಾರದಲ್ಲಿ ಬಂದ ಕೆಲವು ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಂಡರೆ ನನಗೂ ಸಮಾಧಾನ.


ಇಡೀ ಮಹಾಭಾರತವನ್ನೇ ಸೂತ್ರರೂಪದಲ್ಲಿ ಸಂಗ್ರಹಮಾಡುವುದಿದ್ದರೆ, ಅದು ಭಗವದ್ಗೀತೆಯಲ್ಲಿಯೆ ಬಂದುಬಿಟ್ಟಿದೆ! "ಸ್ವಧರ್ಮೇ ನಿಧನಂ ಶ್ರೇಯಂ ಪರಧರ್ಮೋ ಭಯಾವಹ". ಅಲ್ಲವೇ? ಭಾರತದಾದ್ಯಂತ ಎಲ್ಲಿ ನೋಡಿದರೂ ಇದೇ ಸೂತ್ರವನ್ನು ಪ್ರತಿಪಾತ್ರವೂ ತನ್ನ ರೀತಿಯಲ್ಲಿ ವಿಸ್ತರಿಸಿತೋರಿಸುತ್ತದೆ. ಇವೆಲ್ಲದರ ಮಧ್ಯೆ ಶ್ರೀಕೃಷ್ಣನು ಶಾಶ್ವತಮೌಲ್ಯದ ಪ್ರತಿನಿಧಿಯಾಗಿ ಕಾಣುತ್ತಾನೆ. ಮತ್ತು ಅವನೇ ಈ ಸೂತ್ರವನ್ನೂ ಅದಕ್ಕೆ ಭಾಷ್ಯರೂಪವಾಗಿ ಗೀತೆಯನ್ನೂ ಬೋಧಿಸಿದ್ದಾನೆಂದು ನನ್ನ ನಂಬುಗೆ.

ಚೋದ್ಯವೆಂದರೆ, ಶ್ರೀಕೃಷ್ಣನ-ವೇದವ್ಯಾಸರ ದರ್ಶನವು, ಅವರನ್ನು ಸಾಕ್ಷಾತ್ತಾಗಿ ನೋಡಿದ ಅಂದಿನ ಜನರಿಗೂ ತಿಳಿಯಲಿಲ್ಲ. ವ್ಯಾಸರಂತೂ ಕೊನೆಗೆ "ಊರ್ಧ್ವಬಾಹುರ್ವಿರೌಮ್ಯೇಷ......" ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದು ಯಾಕೆ ಹೀಗೆ? ಬಹುಷಃ ಮನುಷ್ಯನಲ್ಲಿರುವ ಮಹತ್ತ್ವಾಕಾಂಕ್ಷೆಯಿಂದ ಇದೆಲ್ಲ ರಾದ್ಧಾಂತವೆನ್ನಿಸುತ್ತದೆ. ಭಾರತವು ನಮಗೆ ಜೀವನಪ್ರೀತಿಯನ್ನು ಯಥೇಷ್ಟವಾಗಿ ಹೇಳಿಕೊಡುವಂತೆ, ಬರೀ ಅರ್ಥಕಾಮಮೋಹಿತರಾದ ಕೆಲವು ಜನರು ಈ ಮಹತ್ತ್ವಾಕಾಂಕ್ಷೆಯ ದೆಸೆಯಿಂದ ತಮ್ಮ ಇಷ್ಟಾರ್ಥಗಳನ್ನು ಹೇಗಾದರೂ ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆಂಬ ಎಚ್ಚರಿಕೆಯನ್ನೂ ನೀಡುತ್ತದೆ. ಹೀಗೆ ಲೋಭಿತರಾದವರ ಆಸ್ಥಾನದಲ್ಲಿ ಪಾಪ ವಿದುರನಂಥವರು ಹೇಗೆ ಉಳಿದಾರು? ಅಲ್ಲದೇ ಆದ್ಯಂತ ಕರ್ತವ್ಯಪರಾಯಣನಾದ ಅರ್ಜುನನಲ್ಲಲ್ಲದೇ ಈ ದ್ವಂದ್ವವು ಕೇವಲ ಫಲವ್ಯಾಮೋಹಿಗಳಾದ ಕೌರವರಲ್ಲಿ ಮೂಡಲು ಸಾಧ್ಯವೇ? ತಮ್ಮ ತಮ್ಮ ಮಟ್ಟದಲ್ಲಿ ಕರ್ತವ್ಯಚ್ಯುತರ; ಮತ್ತಿನ್ನೊಂದರ್ಥದಲ್ಲಿ ಮಹಾತ್ತ್ವಾಕಾಂಕ್ಷೆಯನ್ನು ಬೆಂಬತ್ತಿದ ಎಂಥೆಂಥವರಲ್ಲೂ ಅವರ ವ್ಯಕ್ತಿತ್ವದ ಉತ್ತಮಾಂಶಗಳನ್ನು ಮೀರಿ ಧರ್ಮಮೌಢ್ಯವು ಮೆರೆಯಿತೆಂದರೆ; ಮಾನವಸ್ವಭಾವಕ್ಕೆ ಎಣೆಯುಂಟೆ?


ಇದೆಲ್ಲವನ್ನೂ ಹಿಡಿದು ದರ್ಶನವನ್ನಾಗಿಸಿದ ವ್ಯಾಸರ ಭೌಮಪ್ರತಿಭೆಗೆ ಏನೆನ್ನೋಣ? ನಮಸ್ಕುರ್ಮೋ ಯಥಾಬಲಮ್.

ಲೇಖನಕ್ಕೆ ತುಂಬಾ ಅಭಿನಂದನೆಗಳು. ಮತ್ತೆ ಇಂತಹ ವಿಚಾರಬೋಧಕ ಲೇಖನಗಳನ್ನು ಎದುರು ನೋಡುತ್ತಿದ್ದೇನೆ.

ಧನ್ಯವಾದಗಳು,
ವಿವೇಕ

shaamala said...

ಮಂಜುನಾಥ್ ಅವರೇ,

ನಮಸ್ಕಾರ.

ಬಾಯಾರಿ ಬಂದು ತಿಳಿನೀರ ಹಂಬಲಿಸಿದವರಿಗೆ ಸಿಹಿ ಎಳನೀರ ಹಂಚುತ್ತಿರುವಿರಿ. ತುಂಬಾ ಸೊಗಸಾದ ವಿಶ್ಲೇಷಣೆ, ನಿರೂಪಣೆ.

ಅರ್ಜುನನ ತುಮುಲ ಅವನು 'ನರ'ನಾದ್ದರಿಂದ ಅಲ್ಲವೇ? 'ನಾರಾಯಣನಿ'ಗೆ ಎಲ್ಲರೂ ಒಂದೇ, ಅವನಿಗೆ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ!
ಇನ್ನು ದುರ್ಯೋಧನ ಅರ್ಜುನನ ಸ್ಥಾನದಲ್ಲಿದ್ದಿದ್ದರೆ, ಅವನಿಗೆ ಈ ತುಮುಲವಿರುತ್ತಿತ್ತೆ? ಅವನಿಗೆ ಹದಿಹರೆಯದ ಪೋರ ಅಭಿಮನ್ಯುವನ್ನು ಕಂಡು ಮಮತೆಯುಕ್ಕಲಿಲ್ಲ, ಬದಲಿಗೆ ಸೇಡಿನ ಜ್ವಾಲೆ ಹೊತ್ತಿ ಉರಿಯಿತು.

ನಾನಿನ್ನೂ ಭಗವದ್ಗೀತೆಯ ಹೊರ ಆವರಣವನ್ನು ಅರಿಯಲು ಯತ್ನಿಸುತ್ತಿರುವವಳು. ನೀವು ಬರೆದುದನ್ನು ಓದಿದಾಗ, ಅರೇ, ನನಗೂ ಹೀಗೇ ಅನ್ನಿಸಿತ್ತಲ್ಲವೇ ಈ ಭಾಗವನ್ನು ಓದಿದಾಗ ಎಂದೆನಿಸಿತು. ನಿಮ್ಮ ಬರವಣಿಗೆಯನ್ನು ಓದಿದಮೇಲೆ, ಗೀತೆಯನ್ನು ಇನ್ನೂ ಅರಿಯುವ, ಅಭ್ಯಾಸಿಸುವ ಸ್ಫೂರ್ತಿ!
ಗೀತೆಯ ಉಳಿದ ಭಾಗಗಳ ಬಗೆಗಿನ ನಿಮ್ಮ ವಿಶ್ಲೇಷಣೆಯನ್ನು ಕಾತುರದಿಂದ ಎದುರು ನೋಡುತ್ತಿದ್ದೇನೆ.

ಧನ್ಯವಾದಗಳು,
ಶಾಮಲ

AntharangadaMaathugalu said...

ನಮಸ್ಕಾರ ಮಂಜುನಾಥ್ ಅವರಿಗೆ
ಗೀತೆಯನ್ನು ಓದಿ ಅರ್ಥೈಸಿಕೊಳ್ಳಬೇಕೆಂದು ಆಸೆ ಪಡುತ್ತಿರುವ ನನ್ನಂಥವರಿಗೆ ನಿಮ್ಮ ಈ ಬರಹಗಳು ತುಂಬಾ ಅನುಕೂಲಕರವಾಗಿವೆ. ನನಗೆ ತುಂಬಾ ಇಷ್ಟವಾಯಿತು. ನಿಮ್ಮಿಂದ ನಾನೂ ಸ್ವಲ್ಪ ಕಲಿಯುವ ಆಸೆ...... ಹೃತ್ಪೂರ್ವಕ ಧನ್ಯವಾದಗಳು...

ಶ್ಯಾಮಲ

Manjunatha Kollegala said...

ಧನ್ಯವಾದಗಳು ಶಾಮಲ ಅವರೇ, ಹೌದು, ತುಮುಲ ನರನಿಗಷ್ಟೇ ಹೊರತು ನಾರಾಯಣನಿಗಲ್ಲವಲ್ಲ. ಅನಾದಿಕಾಲದಿಂದಲೂ ಮಾನವನಲ್ಲಿ ನಡೆಯುತ್ತಲೇ ಬಂದಿರುವ ದ್ವಂದ್ವಗಳನ್ನು ಅರ್ಜುನ ಪ್ರತಿನಿಧಿಸುತ್ತಾನೆ.

ಇನ್ನು ದುರ್ಯೋಧನ ಅರ್ಜುನನ ಸ್ಥಾನದಲ್ಲಿದ್ದಿದ್ದರೆ ಅನ್ನುವ ಪ್ರಶ್ನೆಯೇ ಏಳುವುದಿಲ್ಲ. ಇಬ್ಬರೂ ಅದೇ ಸ್ಥಾನದಲ್ಲೇ ಇದ್ದಾರೆ, ಇಬ್ಬರೂ ಯುದ್ಧಭೂಮಿಯಲ್ಲೇ ಇದ್ದಾರೆ. ತುಮುಲ ದುರ್ಯೋಧನನಿಗೆ ಮಾತ್ರವಲ್ಲ ಭೀಮನಿಗೂ ಬರಲಿಲ್ಲ. ಭಾರತದ ಸೊಗಸೆಂದರೆ ಅದರ ಪಾತ್ರಪೋಷಣೆ. ಅದರ ಒಂದೊಂದು ಪಾತ್ರವೂ ಒಂದೊಂದು ಗುಣವನ್ನು ಪ್ರತಿನಿಧಿಸುತ್ತದೆ, ಒಂದೊಂದು ಮೌಲ್ಯವನ್ನೋ ಅಪಮೌಲ್ಯವನ್ನೋ ಎತ್ತಿಹಿಡಿಯುತ್ತದೆ. ಯುದ್ಧ ಈ ಮೌಲ್ಯಗಳ ತಾಕಲಾಟದ ಸಂಕೇತವಾಗಿಯೂ ಬರುತ್ತದೆ. ಆ ದೃಷ್ಟಿಯಿಂದ ದುರ್ಯೋಧನ ಅರ್ಜುನನಾಗಲು ಸಾಧ್ಯವೇ ಇಲ್ಲ

Manjunatha Kollegala said...

ನಮಸ್ಕಾರ ಶ್ಯಾಮಲಾ ಅವರೆ, ಗೀತೆಯನ್ನು ಅರ್ಥೈಸಿಕೊಳ್ಳಲು ಈ ಬರಹಗಳು ಎಷ್ಟು ಸಹಾಯ ಮಾಡುತ್ತವೋ ತಿಳಿಯದು. ಈ ಬ್ಲಾಗಿನ ಪೀಠಿಕೆಯಲ್ಲಿ ಹೇಳಿದಂತೆ, ನನ್ನ ಗೀತಾ ವಿಚಾರಲಹರಿ ಕೇವಲ ವಿಚಾರ ಲಹರಿಯಷ್ಟೇ. ನನ್ನದೇ ಓದಿನ ದಾರಿಯಲ್ಲಿ ಮನಸ್ಸಿನಲ್ಲಿ ಮೂಡಿದ ವಿಚಾರಗಳನ್ನು ದಾಖಲಿಸುವುದಷ್ಟೇ ಇದರ ಉದ್ದೇಶ. ಗೀತೆಯ ಅಧ್ಯಯನ ನಿಜಕ್ಕೂ ಜ್ಞಾನಕಾರಿ ಅನ್ನುವುದೇನೋ ನಿಜ. ನಿಮ್ಮ ಆಸಕ್ತಿ ಇದು ಸ್ಫೂರ್ತಿನೀಡಿದರೆ ಅದು ಸಂತೋಷದ ವಿಷಯ

* ನಮನ * said...

ನಮಸ್ತೆ,
ಮೊದಲ ಬಾರಿಗೆ ಭೇಟಿ ನಿಮ್ಮ ಬ್ಲಾಗಿಗೆ.ತುಂಬ ಚೆನ್ನಾಗಿದೆ.ವಿಜಯಕರ್ನಾಟಕದ ವೆಬ್ಬಾಗಿಲು ಅಂಕಣದಲ್ಲಿ ಈ ದಿನ. http://www.vijaykarnatakaepaper.com/svww_zoomart.php?Artname=20100915l_002101008&ileft=757&itop=547&zoomRatio=130&AN=20100915l_002101008

V.R.BHAT said...

Nice !ನೀವೇ ಸ್ವತಃ ಬ್ಲಾಗಿಗರದರೂ ಬ್ಲಾಗಿಗರ ಬಗ್ಗೆ ತಮ್ಮಲ್ಲಿ ಯಾವ ಭಾವನೆ ಇದೆ ಎಂದು ತಿಳಿಯುತ್ತಿಲ್ಲ! ಕೆಲವೊಮ್ಮೆ ಪ್ರತಿಕ್ರಿಯೆಗೆ ಸ್ಪಂದನ ಕೂಡ ಕಾಣಿಸಲಿಲ್ಲ,ನಿಮಗೆ ಸಮಯ ಸಿಗುವುದೋ ಇಲ್ಲವೋ ಅದು ಬೇರೇ ವಿಚಾರ, ಆದರೆ ಕೆಲವಾರು ಬ್ಲಾಗನ್ನು ನೀವೂ ಆಗಾಗ ಸುತ್ತಿದರೆ ನಿಮ್ಮ ಸದಭಿರುಚಿಯ ಲೇಖನಗಳ ಸರಮಾಲೆ ಎಲ್ಲರಿಗೂ ರುಚಿಸೀತು, ನಿಮ್ಮ ಸಹಬ್ಲಾಗಿಗರಾದ ಸುಧೀಂಧ್ರರು ಸುಮಾರಾಗಿ ಎಲ್ಲಾ ಬ್ಲಾಗಿಗೂ ಭೇಟಿ ಇತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅನಿಸಿಕೆ, ಸ್ವೀಕೃತವೋ ತಿರಸ್ಕೃತವೋ ನಿಮಗೇ ಬಿಟ್ಟಿದ್ದು. ಧನ್ಯವಾದ

Manjunatha Kollegala said...

ಧನ್ಯವಾದ ನಮನ ಅವರೆ, ಗೀತಾವಿಚಾರಲಹರಿಗೆ ತಮಗೆ ಸ್ವಾಗತ. ಬರುತ್ತಿರಿ.

ಭಟ್ಟರೇ, ಮೊದಲಿಗೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. "ಕೆಲವೊಮ್ಮೆ ಪ್ರತಿಕ್ರಿಯೆಗೆ ಸ್ಪಂದನ ಕೂಡ ಕಾಣಿಸಲಿಲ್ಲ" - ಆಶ್ಚರ್ಯ! ನನ್ನ ಎಲ್ಲಾ ಬ್ಲಾಗುಗಳ ಬಹುತೇಕ ಎಲ್ಲಾ ಪ್ರತಿಕ್ರಿಯೆಗಳಿಗೂ ಸ್ಪಂದಿಸಿದ್ದೇನಲ್ಲ! ಅದರಲ್ಲೂ ಬರುವುದೇ ಅಲ್ಲೊಂದು ಇಲ್ಲೊಂದು ಪ್ರತಿಕ್ರಿಯೆಯಾದ್ದರಿಂದ ಅವುಗಳಿಗೆ ಸ್ಪಂದಿಸಲು ಸಮಯದ ಅಭಾವವೇನೂ ಕಾಣದು :)

ಇರಲಿ, ನಿಮ್ಮ ಎರಡನೆಯ ಮಾತಂತೂ ನಿಜ. ಎದ್ದು ತುಸು ಬ್ಲಾಗು ಸುತ್ತಾಡುವಷ್ಟೂ ಚಟುವಟಿಕೆಯಿಲ್ಲದ ಸೋಮಾರಿತನ ನನ್ನಲ್ಲಿ ಮನೆಮಾಡಿರುವುದಂತೂ ನಿಜ :) ಜೊತೆಗೆ ವಿಪರೀತ ಸಮಯದ ಒತ್ತಡವೂ! ತಮ್ಮ ಈ ಮಾತು ಅದಕ್ಕೆ ಮದ್ದು.

ಹಾಗಂತ ನಾನು ಸುತ್ತಾಡುವುದೇ ಇಲ್ಲವೆಂದೇನು ಇಲ್ಲ. ಆದರೆ ನಾನು ಓದುವುದಕ್ಕಿಂದ ಓದಬೇಕೆಂದು ಪಟ್ಟಿಮಾಡಿಟ್ಟುಕೊಳ್ಳುವುದೇ ಹೆಚ್ಚು.

V.R.BHAT said...

ಒಳ್ಳೆಯ ಹಾಗೂ ಮೌಲಿಕ ಲೇಖನಗಳಿಗೆ, ಕೃತಿಗಳಿಗೆ ಪ್ರತಿಕ್ರಿಯೆ ಕಮ್ಮಿಯೇ ಇರುತ್ತದೆ, ಒಂದು --ಕೆಲವರು ಆ ತರಹದ ಓದನ್ನು ಸದಾ ಇಷ್ಟಪಡುವುದಿಲ್ಲ, ಎರಡ್ನೇ ಕಾರಣ-ಕೆಲವರಿಗೆ ಇನ್ನೂ ರಾಮಾಯಣ, ಮಹಾಭಾರತ, ಗೀತೆ ಇವೆಲ್ಲವನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ[ಇದಕ್ಕೆ ಕಾರಣ ಅಸಡ್ಡೆಯೂ ಇರಬಹುದು]. ಹೀಗಾಗಿ ನಿಮ್ಮಂತಹ ವಿಚಾರವಂತ ಲೇಖಕರು ಅವರನ್ನು ನೋಡಿ ಬರೆಯುವ ಅವಶ್ಯಕತೆಯಿಲ್ಲ, ನೀವು ಬರೆಯಿರಿ, ನಾವೆಲ್ಲಾ ಇದ್ದೇವಲ್ಲ- ನಿದ್ದೆ ಬಿಟ್ಟಾದರೂ ಓದುತ್ತೇವೆ, ನಮಗೆ ಓದು,ಬರಹದ ಗೀಳು ಅಷ್ಟಿಷ್ಟಲ್ಲ! ಹೀಗಾಗಿ ಹಿಂದೆ ನಾನು ಪ್ರತಿಕ್ರಿಸಿದ್ದಕ್ಕೆ ನೀವು ಸ್ಪಂದಿಸಿರದ ಕಾರಣ ಹಾಗೆ ಬರೆದಿದ್ದೆ, ಅದಕ್ಕಾಗಿ ಬೇಸರಿಸಬೇಡಿ,ವೇಗದಲ್ಲೇ ಬರೆಯಿರಿ,ನಮ್ಮ ಜೀವಿತದಲ್ಲಿ ಆದಷ್ಟೂ ಹೆಚ್ಚಿನ ಹಾಗೂ ಸಕಾಲಿಕ,ಉತ್ತಮ ಬರಹಗಳು ಬಹಳ ಬರಲಿ ಎನ್ನುವುದು ನನ್ನ ಆಶಯ, [ನಾವು ನಮ್ಮಲ್ಲಿ ಶ್ರೀಮದ್ಭಾಗವತದ ಹಲವು ಕಥೆಗಳನ್ನು ಯಕ್ಷಗಾನದ ರೂಪದಲ್ಲಿ ನೋಡಿತಿಳಿದದ್ದರಿಂದ ಅದು ಮನದಲ್ಲಿ ಅಚ್ಚಾಗಿ ಬಿಟ್ಟಿದೆ, ಆದರೆ ಬಹುತೇಕರಿಗೆ ಅದಿನ್ನೂ ದೂರದ ವಿಷಯ] ಬನ್ನಿ ನಮ್ಮಲ್ಲಿರುವುವುದನ್ನು ಹಂಚಿಕೊಳ್ಳೋಣ, ನಿಮಗೆ ಸದಾ ಸ್ವಾಗತ ಹಾಗೂ ಅಭಿನಂದನೆಗಳು.